ಜಿಲ್ಲೆ

ರಾಮಾಯಣದ ಮೂಲಕ ಧರ್ಮ, ಜ್ಞಾನ ಕೊಟ್ಟವರು ವಾಲ್ಮೀಕಿ: ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ರಾಮಾಯಣದ ಮೂಲಕ ಇಡೀ ಪ್ರಪಂಚಕ್ಕೆ ಧರ್ಮದ ಮೌಲ್ಯ, ನೈತಿಕತೆಯನ್ನು ನೀಡಿದವರು ಮಹರ್ಷಿ ವಾಲ್ಮೀಕಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ನಾಯಕ ಜನಾಂಗದ ಸಂಘಗಳಿಂದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಬಡತನದಲ್ಲಿ ಹುಟ್ಟಿ ತಮ್ಮ ತಪಸ್ಸಿನ ಮೂಲಕ ಅಸಾಧಾರಣವಾದ ಬುದ್ಧಿ ಶಕ್ತಿಯನ್ನು ಗೆದ್ದವರು. ರಾಮಾಯಣದ ಮೂಲಕ ಧರ್ಮ ಜ್ಞಾನವನ್ನು ಕೊಟ್ಟವರು ಎಂದರು.

ಇವರ ಹೆಸರು ಚೀರಸ್ಥಾಯಿಯಾಗಿ ಉಳಿಯಲಿ ಎಂದು ವಿಧಾನಸೌಧ ಮುಂದೆ 3 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ರಾಮಾಯಣದ ಮೂಲಕ ನೈತಿಕತೆ, ಧರ್ಮಪಾಲನೆಯನ್ನು ತಿಳಿಸಿದರು. ಸಾಮಾಜಿಕ ಆರ್ಥಿಕ, ಸಮಾನತೆಯ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬಿತ್ತಿದವರು ಮಹರ್ಷಿಗಳು ಎಂದು ತಿಳಿಸಿದರು.

ಮೂಢನಂಬಿಕೆಗಳಿಗೆ ಒಳಗಾಗದೆ, ಜಾತಿ-ಜಾತಿ ಎಂದು ಹೊಡೆದಾಡದೆ ಎಲ್ಲರೂ ಸಮಾನವಾಗಿ ಬದುಕಬೇಕು, ಜಾತಿ ರಹಿತವಾದಂತಹ ಸಮಾಜವನ್ನು ಕಟ್ಟಬೇಕು, ನಾವು ಒಗ್ಗಟ್ಟಿನಿಂದ ಬದುಕಬೇಕು, ವಾಲ್ಮೀಕಿ ಹೇಳಿರುವಂತಹ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಜಗತ್ತಿಗೆ ಮಾನವೀಯ ಹಾಗೂ ಧರ್ಮದ ನಡೆಯಲ್ಲಿ ಸಾಗಬೇಕೆಂಬ ಮಾತುಗಳನ್ನು ಸಾರಿದ ಮಹರ್ಷಿ ವಾಲ್ಮೀಕಿ ಸಂದೇಶ, ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ತಮ್ಮ ಜ್ಞಾನದ ಮೂಲಕ ಸುಜ್ಞಾನದ ಬೆಳಕನ್ನು ನೀಡಿದ ಮಹಾನ್ ಜ್ಞಾನಿ ಮಹರ್ಷಿ ವಾಲ್ಮೀಕಿ. ರಾಮಾಯಣ ಎಂಬ ಮಹಾ ಕಾವ್ಯವನ್ನು ಬರೆಯುವುದರ ಮೂಲಕ ಜಗತ್ತಿಗೆ ಬೆಳಕಾಗಿದ್ದಾರೆ ಎಂದರು.

ನೂರಾರು ವರ್ಷಗಳ ಹಿಂದೆ ವೇದದಲ್ಲಿ ಹುಟ್ಟಿದ್ದು ಧರ್ಮ. ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಲಾಭ, ನಷ್ಟಗಳನ್ನು ಪಡೆಯಲು ಅಲ್ಲ ಎಂಬುದನ್ನು ರಾಮಾಯಣದ ಕಥೆಯ ಮೂಲಕ ವಾಲ್ಮೀಕಿ ನೈತಿಕತೆಯನ್ನು ಸಾರಿದರು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ವಾಲ್ಮೀಕಿ ಪುತ್ಥಳಿ ಅನಾವರಣವನ್ನು ಶೀಘ್ರದಲ್ಲೇ ಮಾಡಲಾಗುವುದು. ಈಗಾಗಲೇ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿರುವುದಲ್ಲದೆ, ಕೆತ್ತನೆ ಕೆಲಸ ಶುರುವಾಗಿದೆ. ಬಹುವರ್ಷಗಳ ಬೇಡಿಕೆ ಶೀಘ್ರ ಈಡೇರಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಹರೀಶ್‌ಗೌಡ ಮಾತನಾಡಿ, ಸದಾಚಾರದಿಂದ ಬದುಕುವಂತಹ ಮನುಕುಲಕ್ಕೆ ರಾಮಾಯಣ ಎಂಬ ಮಹಾಗ್ರಂಥವನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ. ಅವರ ಆದರ್ಶಗಳು ನಮಗೆ ಸ್ಪೂರ್ತಿ ಎಂದು ಹೇಳಿದರು.

ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹಿರಿಯ ಕಾನೂನು ಸಹಾಯಕ ಪ್ರಾಧ್ಯಾಪಕ ಡಾ.ಡಿ.ರಂಗಸ್ವಾಮಿ ಮಾತನಾಡಿ, ಸಮಾಜದಲ್ಲಿ ಶ್ರೀಮಂತವಾದ ಹಿನ್ನೆಲೆಯನ್ನು ಹೊಂದಿರುವಂತಹ ಪರಂಪರೆ ಎಂದರೆ ಮಹರ್ಷಿ ವಾಲ್ಮೀಕಿ ಅವರ ಪರಂಪರೆ. ದೃಷ್ಟ ಶಕ್ತಿಯನ್ನು ದೈವ ಶಕ್ತಿಯ ಮುಂದೆ ಸೋಲುವಂತಹ ಕೆಲಸ ಮಾಡಿದವರು ಮಹರ್ಷಿ ವಾಲ್ಮೀಕಿ ಎಂದರು.

ಜಯಂತಿಯ ಮೂಲ ಉದ್ದೇಶ ಮಹಾನ್ ವ್ಯಕ್ತಿಗಳ ಜೀವನದ ಬಗ್ಗೆ ತಿಳಿದುಕೊಳ್ಳುವುದಾಗಿದ್ದು, ಜಯಂತಿ ಆಚರಣೆಯ ಉದ್ದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಹಿರಿಯರು ನಡೆದುಬಂದ ಹಾದಿಯನ್ನು ನಾವು ಪಾಲಿಸಬೇಕು ಎಂದರು.

ಶಾಸಕರಾದ ತನ್ವೀರ್‌ಸೇಠ್ ಮಾತನಾಡಿ, ಕೆಲವೇ ಜಾತಿ, ಧರ್ಮದ ಆಧಾರಲ್ಲಿ ಮನುಷ್ಯ ಬದುಕಲು ಸಾಧ್ಯವಿಲ್ಲ, ಶಿಕ್ಷಣ ನಮ್ಮ ಮೂಲ ಮುದ್ರೆಯಾಗಬೇಕು. ಶಿಕ್ಷಣ ಪಡೆದು ಸಮಾಜವನ್ನು ಮುನ್ನಡೆಸಬೇಕು. ಇತಿಹಾಸವನ್ನು ತಿಳಿದು ಬದುಕಿದಾಗ ಸಮುದಾಯವು ಮುಂದೆ ಬರುತ್ತದೆ ಇದರ ಜತೆ ಸರ್ಕಾರದ ಯೋಜನೆಗಳನ್ನು ಸಮುದಾಯ ಜನರು ಪಡೆದುಕೊಳ್ಳಬೇಕು ಎಂದರು.

ಎಸ್‌ಎಸ್‌ಎಲ್ಸಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪುರಸ್ಕಾರಿಸಲಾಯಿತು. ಪರಿಶಿಷ್ಟ ವರ್ಗದ ಶಾಲೆಗಳ ಪ್ರಾಧ್ಯಾಪಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಡಾ ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್‌ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ನಗರಪಾಲಿಕೆ ಆಯುಕ್ತ ಶೇಖ್‌ತನ್ವೀರ್ ಆಸಿಫ್, ನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್ (ಪಿಯಾ) ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಎಂ.ಕೆ. ಮಲ್ಲೇಶ್, ಶ್ರೀಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿ. ಶಿವಕುಮಾರ್ ಇತರರಿದ್ದರು.