ಜಿಲ್ಲೆ

ಜಗತ್ತಿಗೆ ನೀತಿಶಾಸ್ತ್ರ ಬೋಧಿಸಿದ ವಾಲ್ಮೀಕಿ

ವಸಂತಕುಮಾರ್ ಬಿ

ಆಲೂರು: ವಾಲ್ಮೀಕಿ ಮಹರ್ಷಿ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ರಾಮಾಯಣದಂತಹ ಮಹಾಕಾವ್ಯವನ್ನು ಬರೆದದ್ದು ಕೂಡ ಮಹರ್ಷಿ ವಾಲ್ಮೀಕಿ. ಆದ್ದರಿಂದ ಇದನ್ನು ವಾಲ್ಮೀಕಿ ರಾಮಾಯಣ ಎಂದು ಕರೆಯಲಾಗುತ್ತದೆ ಎಂದು ಗ್ರೇಡ್ 2 ತಹಸೀಲ್ದಾರ್ ಪೂರ್ಣಿಮಾ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಆಲೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಜಿಪಂ, ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ. ರಾಮಾಯಣದ ಮೂಲಕ ರಾಜಧರ್ಮ, ನೀತಿಶಾಸ್ತ್ರವನ್ನು ಜಗತ್ತಿಗೆ ಬೋಧಿಸಿದ ವಾಲ್ಮೀಕಿ ಮಹರ್ಷಿಯು ಪ್ರಾತಃ ಸ್ಮರಣೀಯರು ಎಂದರು.

ತಾಲೂಕು ದಲಿತ ಸಂಚಾಲಕ ಬಸವರಾಜು ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಗ್ರಂಥ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಅದರಲ್ಲಿ ಸಹೋದರತೆ, ಸಮಾನತೆಯ ಅಂಶಗಳು ಅಡಗಿವೆ. ಅವರು ಯಾವುದೇ ವರ್ಗಕ್ಕೆ ಸೀಮಿತರಲ್ಲ. ಅವರು ಜಾತ್ಯತೀತ ವ್ಯಕ್ತಿಯಾಗಿದ್ದು, ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿ ಬೆಥೆಸ್ಥಾ ವಿದ್ಯಾ ಸಂಸ್ಥೆ ಪ್ರಾಂಶುಪಾಲ ಚಂದ್ರಶೇಖರ್, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಶ್ರೀರಾಮಾಯಣವು ಸಾರ್ವಕಾಲಿಕವಾದದ್ದು. ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವನ್ನು ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಅನೇಕ ರಾಷ್ಟ್ರಗಳು ಒಪ್ಪಿಕೊಂಡಿವೆ. ಈ ಮಹಾಕಾವ್ಯ ಜಗತ್ತಿನಲ್ಲಿ ಇಂದಿಗೂ ಮಾನವೀಯತೆ, ಧರ್ಮ ಸಂಸ್ಕಾರ ನೆಲೆಸಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿ ಆವರಣದಲ್ಲಿರುವ ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ಮಾಡಲಾಯಿತು. ನಂತರ ಬ್ಯಾಬ ಗ್ರಾಮದ ಹಿರಿಯ ಕಲಾವಿದ ರಂಗಯ್ಯ ಅವರಿಂದ ಶ್ರೀರಾಮ ಭಜನೆ ನಡೆಯಿತು. ನಂತರ ವಾಲ್ಮೀಕಿ ಸಮುದಾಯದ ರಾಮನಾಯಕರನ್ನು ಹಾಗೂ ದಲಿತ ಮುಖಂಡ ಬಸವರಾಜ್, ಗ್ರೇಟ್ 2 ತಹಸೀಲ್ದಾರ್ ಪೂರ್ಣಿಮಾ, ಬೆಥೆಸ್ಥಾ ವಿದ್ಯಾ ಸಂಸ್ಥೆ ಪ್ರಾಂಶುಪಾಲ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲೇಶ್, ಸಮಾಜ ಕಲ್ಯಾಣ ಅಧಿಕಾರಿ ಲಿಂಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಗೋವಿಂದೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದೇಶ್ ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ್ ಇತರರು ಇದ್ದರು.