ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ಡಾ.ರಾಮ್ ಎಲ್.ಅರಸಿದ್ದಿ , ಎಸ್.ಎಂ.ವಾಲಿ, ಸಿ.ಬಿ.ದೇವರಮನಿ, ಮಲ್ಲಿಕಾರ್ಜುನ ಬಟಗಿ, ಬಿ.ಎಸ್.ಗಸ್ತಿ ಇದ್ದರು.  
ಜಿಲ್ಲೆ

ವಿಜಯಪುರ : ವಾಲ್ಮೀಕಿ ಮಹರ್ಷಿ ತತ್ವಾದರ್ಶ ಪಾಲಿಸಿ

ವಿಜಯಪುರ : ವಾಲ್ಮೀಕಿ ಮಹರ್ಷಿ ದೇಶ ಕಂಡ ಮಹಾನ್ ದಾರ್ಶನಿಕರಲ್ಲಿ ಒಬ್ಬರಾಗಿದ್ದಾರೆ. ಮಾತೃ, ಪಿತೃ, ಆಚಾರ್ಯ, ಅತಿಥಿ ದೇವೋಭವ, ಪಿತೃವಾಕ್ಯ ಪರಿಪಾಲನೆಯಂತಹ ಹಲವಾರು ಸಾಮಾಜಿಕ ಮೌಲ್ಯಗಳನ್ನು ಮಹರ್ಷಿ ಅವರು ಬರೆದಂತಹ ರಾಮಾಯಣ ಮಹಾಕಾವ್ಯದಲ್ಲಿ ಕಾಣಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕವಾಗಿ ಹೆಸರಾದ ರಾಮಾಯಣ ಮಹಾಕಾವ್ಯದಲ್ಲಿನ ಹಲವಾರು ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಅಲ್ಲಿನ ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಲೇಶ್ವರದ ಶಾಂತವೀರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಸಾಹಿತಿ ಪ್ರೊ.ಮಹಾದೇವ ರೆಬಿನಾಳ ವಿಶೇಷ ಉಪನ್ಯಾಸ ನೀಡಿ, ನಮ್ಮ ದೇಶ ಅನೇಕ ಮಹಾತ್ಮರು ಜನಿಸಿದ ಪುಣ್ಯಭೂಮಿಯಾಗಿದೆ. ಇಂತಹ ಮಹತ್ವದ ನೆಲದಲ್ಲಿ ಜನಿಸಿದ ನಾವು ಪುಣ್ಯವಂತರು. ರಾಮಾಯಣ ಮತ್ತು ಅಲ್ಲಿನ ಉಪಕಥೆಗಳು ನಮ್ಮ ಜೀವನಕ್ಕೆ ದಾರಿದೀಪವಾಗಿವೆ. ಸೂರ್ಯ ಚಂದ್ರರಿರುವವರೆಗೂ ರಾಮಾಯಣವು ಅಮರ ಕಾವ್ಯವಾಗಿ ಇರಲಿದೆ. ವಾಲ್ಮೀಕಿ ಅವರು ಕೂಡ ಅಮರರಾಗಿರುತ್ತಾರೆ ಎಂದು ತಿಳಿಸಿದರು.

ನಾವುಗಳು ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ನಮ್ಮ ಮಕ್ಕಳಿಗೆ ರಾಮಾಯಣದ ಆದರ್ಶಗಳನ್ನು ತಿಳಿಸಬೇಕು. 24 ಸಾವಿರ ಶ್ಲೋಕಗಳನ್ನು ಹೊಂದಿರುವ ರಾಮಾಯಣ ಭರತ ಖಂಡ ಅಲ್ಲದೆ ಜಾಗತಿಕವಾಗಿಯೂ ಪ್ರಸಿದ್ಧಿಯನ್ನು ಪಡೆದಿದೆ. ರಾಮನಾಮದ ಜಪ ಕೇವಲ ಭಾರತ ಅಲ್ಲದೆ ವಿದೇಶಗಳಲ್ಲೂ ಹರಡಿದ ಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ. ಅನೇಕ ಭಾಷೆಗಳಲ್ಲಿ ರಾಮಾಯಣ ಅನುವಾದಗೊಂಡಿದ್ದು, ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರು.

ಅನೇಕ ಮಹಾಕಾವ್ಯಗಳು ಈ ಜಗತ್ತಿನಲ್ಲಿ ಬಂದು ಹೋಗಿವೆ. ಕೆಲವು ನಶಿಸಿವೆ. ಆದರೆ ರಾಮಾಯಣ ಇಂದಿಗೂ ಪ್ರಸ್ತುತವಾಗಿದೆ. ಭರತನ ಸಹೋದರತೆ, ನಾಗರಿಕತೆ, ನಗರ ಜೀವನದ ಪರಿಕಲ್ಪನೆ, ದಶರಥನ ಪುತ್ರ ಪೇಮ ಹೀಗೆ ಅನೇಕ ಸಂಗತಿಯನ್ನು ರಾಮಾಯಣದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಸಾಹಸಕ್ಕೆ ಹೆಸರುವಾಸಿಯಾದ ಬೇಡ ಜನಾಂಗ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಆಳ್ವಿಕೆ ನಡೆಸಿದ್ದಾರೆ. ಗುರುಭಕ್ತಿಗೆ ಬೆರಳು ಕೊಟ್ಟ, ದೈವಭಕ್ತಿಗೆ ಕಣ್ಣು ಕೊಟ್ಟ, ಪ್ರಜೆಗಳಿಗಾಗಿ ಖಡ್ಗ ಹಿಡಿದ, ಸನ್ಮಾರ್ಗದಲ್ಲಿ ಹೋಗುವಂತೆ ಧರ್ಮಗ್ರಂಥ ನೀಡಿದ ಸಮಾಜ ಅದು ವಾಲ್ಮೀಕಿ ಸಮಾಜ ಎಂದು ನುಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್ ಡಾ.ರಾಮ್ ಎಲ್.ಅರಸಿದ್ದಿ , ಪರಿಶಿಷ್ಟ ವರ್ಗಗಳ ಅಪರ ಕಾರ್ಯದರ್ಶಿ ಎಸ್.ಎಂ.ವಾಲಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ವಾಲ್ಮೀಕಿ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಬಟಗಿ, ಬಿ.ಎಸ್.ಗಸ್ತಿ, ಎ.ಎಸ್.ರೆಬಿನಾಳ, ಎಸ್.ಡಿ.ದುರಗಣ್ಣವರ, ಭಾರತಿ ಕೌಲಗಿ, ಚನ್ನಮ್ಮ ಬಟಗಿ, ಮಹಾದೇವ ನಾಟೀಕರ, ಮಳಸಿದ್ದ ನಾಯಕವಾಡಿ, ಲಕ್ಷ್ಮ್ಮಣ ಕೋಳುರಗಿ, ಈರಪ್ಪ ಯಡಹಳ್ಳಿ, ಅಮಿತ್ ನಾಯಕವಾಡಿ, ಎಸ್.ಎಲ್.ನಾಟಿಕರ, ಮಹಾದೇವ ವಾಲಿಕಾರ, ಮಂಜುನಾಥ ಆರೇಶಂಕರ, ಬಿ.ಕೆ.ತೊಂಡೆನವರ, ಬಾಬು ಜಾನಮಟ್ಟಿ, ವಿಶ್ವನಾಥಗೌಡ ಬಟಗಿ, ಎಸ್.ಎಸ್.ಬೇಡರ, ಬಿ.ಎಸ್.ರೆಬಿನಾಳ, ಕಾವೇರಿ ಬಟಗಿ, ಡಿಡಿಪಿಐ ಉಮೇಶ ಶಿರಹಟ್ಟಿಮಠ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಸ್.ಎಂ.ಬರಗಿಮಠ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಮತ್ತಿತರರಿದ್ದರು.