ಮಂಡ್ಯ: ಮಕ್ಕಳು ಮಹರ್ಷಿ ವಾಲ್ಮೀಕಿ ಅವರಂತೆ ಜ್ಞಾನ ಭಂಡಾರವನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಅವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯು ಅತ್ಯುತ್ತಮ ಜ್ಞಾನ ಭಂಡಾರವನ್ನು ಹೊಂದಿದ್ದರಿಂದ ಮಹಾಕಾವ್ಯ ರಾಮಾಯಣ ಬರೆದಿದ್ದಾರೆ ಎಂದರು.
ವಾಲ್ಮೀಕಿ ಎಂದಾಕ್ಷಣ ನಮಗೆಲ್ಲ ನೆನಪಾಗುವುದೇ ರಾಮಾಯಣ. ಅವರು ಯಾವುದೇ ಗುರುಕುಲಕ್ಕೆ ಹೋಗಿ ಪಾಠ ಕಲಿತವರಲ್ಲ. ಏಕೆಂದರೆ ಹಿಂದಿನ ಕಾಲದಲ್ಲಿ ಶೂದ್ರರಿಗೆ ಯಾವುದೇ ವೈದಿಕರು ವಿದ್ಯೆ ನೀಡುತ್ತಿರಲಿಲ್ಲ. ಶೂದ್ರರಾಗಿ ಹುಟ್ಟಿದ ವಾಲ್ಮೀಕಿ ಅವರು ಯಾವುದೇ ಗುರುವಿನ ಸಹಾಯ ಪಡೆಯದೆ ರಾಮಾಯಣ ರಚಿಸಿದ ಕೀರ್ತಿ ಅವರದಾಗಿದೆ. ಮಾತ್ರವಲ್ಲದೆ ರಾಮಾಯಣದಲ್ಲಿ ಬರುವ ಪಾತ್ರಗಳನ್ನು ಉತ್ತಮವಾಗಿ, ಸವಿಸ್ತಾರ ಹಾಗೂ ಅದ್ಬುತವಾಗಿ ತೋರಿಸಿದ್ದಾರೆ. ಅವರು ಸಂಸ್ಕೃತ ಭಾಷೆಯಲ್ಲಿ ಬರೆದ ರಾಮಾಯಣವನ್ನು ಹೊಸ ಕನ್ನಡಕ್ಕೆ ಹಲವಾರು ಕವಿಗಳು ಭಾಷಾಂತರ ಮಾಡಿದ್ದಾರೆ. ನಮ್ಮ ಸರ್ಕಾರವು ಕೂಡ ವಾಲ್ಮೀಕಿ ಜನಾಂಗದ ಏಳಿಗೆಗೆ ಅನುದಾನವನ್ನು ನೀಡಿ, ಮುಂದಿನ ದಿನಗಳಲ್ಲೂ ಕೂಡ ಸದಾ ಕಾಲ ಜತೆಯಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಭರತ ಖಂಡಕ್ಕೆ ರಾಮಾಯಣವೆಂಬ ಗ್ರಂಥವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವದಲ್ಲಿ ಅಡಗಿರುವ ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಾತ್ರವಲ್ಲದೆ ತಮ್ಮ ಮಕ್ಕಳಿಗೂ ತಿಳಿಸಬೇಕು. ರಾಮಾಯಣ ಸುಮಾರು 24 ಸಾವಿರ ಶ್ಲೋಕಗಳನ್ನು ಒಳಗೊಂಡಿದ್ದು, ಈ ಮಹಾಕಾವ್ಯದ ನೆಲೆಗಟ್ಟಿನಲ್ಲಿ ದೇಶದ ಎಲ್ಲ ಭಾಷೆಯಲ್ಲಿಯೂ ರಚಿತವಾಗಲು ಮಹರ್ಷಿ ವಾಲ್ಮೀಕಿ ಅವರು ಕಾರಣರಾಗಿದ್ದಾರೆ. ಯಾವುದೇ ಒಂದು ಸಾಹಿತ್ಯ ರಚನೆಯಾದರೆ ಅದು ಆ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗುತ್ತದೆ. ಆದರೆ ಸಾವಿರಾರು ವರ್ಷಗಳ ಹಿಂದೆ ಬರೆದಂತಹ ರಾಮಾಯಣ ಮಹಾಕಾವ್ಯ ಇಂದಿಗೂ ಹಾಗೂ ಸೂರ್ಯ, ಚಂದ್ರರಿರುವವರೆಗೂ ಪ್ರಸ್ತುತವಾಗಿರುತ್ತದೆ. ಏಕೆಂದರೆ ಅಷ್ಟೊಂದು ನೈತಿಕ ಮೌಲ್ಯಗಳು ಈ ಕಾವ್ಯದಲ್ಲಿ ಅಡಗಿದೆ ಎಂದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ನಂಬಿಕೆಯ ಕೊರತೆ ಇದೆ. ಜೀವನದಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯ. ರಾಮಾಯಣದಲ್ಲಿ ಬರುವ ಸೀತೆ ರಾಮನ ಮೇಲೆ ಇಟ್ಟಿದ್ದ ನಂಬಿಕೆ. ಗುರುಗಳು ಲವಕುಶರ ಮೇಲೆ ಇಟ್ಟಿದ್ದಂತಹ ನಂಬಿಕೆಯು ನಮ್ಮ ಮಧ್ಯೆ ಇರಬೇಕು ಎಂದು ತಿಳಿಸಿದರು.
ಮಂಡ್ಯ ಎಇಟಿ ಮಹಾಶಿಕ್ಷಣ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಚ್.ಪಿ.ಧರ್ಮೇಶ್ ಉಪನ್ಯಾಸ ನೀಡಿದರು. ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಂಡಾ ಅಧ್ಯಕ್ಷ ನಯೀಂ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಸದಸ್ಯರಾದ ಶ್ರೀಧರ್, ಶಿವಲಿಂಗು, ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಪೌರಾಯುಕ್ತ ಎಂ.ಪಿ.ಕೃಷ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್ ಇತರರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಾಲ್ಮೀಕಿ ಜನಾಂಗದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಅಂತೆಯೇ ಎಸ್‌ಎಸ್‌ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮೆರವಣಿಗೆ: ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಚಾಲನೆ ನೀಡಿದರು. ಡೊಳ್ಳುಕುಣಿತ, ತಮಟೆ, ನಗಾರಿ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾ ತಂಡ ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ವಿಶೇಷ ಮೆರಗು ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.