ತುಮಕೂರು: ವ್ಯಕ್ತಿ ಹಾಗೂ ಸಮಾಜ ಯಾವ ರೀತಿಯಲ್ಲಿ ತನ್ನ ಹೊಣೆಗಾರಿಕೆ ನಿರ್ವಹಿಸಬೇಕು ಎಂಬುದನ್ನು ಭಾರತೀಯ ಮಹಾಕಾವ್ಯಗಳು ತಿಳಿಸಿಕೊಟ್ಟಿವೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.
ತುಮಕೂರು ವಿವಿ ಗಿರಿಜನ ಉಪಯೋಜನೆ ಹಾಗೂ ಬುಡಕಟ್ಟು ಅಧ್ಯಯನ ಕೇಂದ್ರದಿಂದ ಶನಿವಾರ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು. ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಜ್ಞಾನ, ಕೌಶಲ ಹಾಗೂ ಅಭಿವೃದ್ಧಿ ಸಮನ್ವಯಗೊಳಿಸುವ ಕಲೆ ರಾಮಾಯಣ ಹಾಗೂ ಮಹಾಭಾರತದ ತಿರುಳಾಗಿದ್ದು ಇದನ್ನೇ ಎಲ್ಲ ವಿಶ್ವವಿದ್ಯಾಲಯಗಳು ಹೇಳಿಕೊಡುತ್ತಿವೆ ಎಂದರು.
ವಾಲ್ಮೀಕಿ ಹಾಗೂ ವ್ಯಾಸ ಅವರನ್ನು ನೆನೆಯದೇ ರಾಮಾಯಣ ಹಾಗೂ ಮಹಾಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ನಮಗಿರಬೇಕು, ವಿವಿಗಳಲ್ಲಿ ಇವರ ಹೆಸರಿನ ಪೀಠಗಳನ್ನು ಸ್ಥಾಪಿಸುವುದಷ್ಟೇ ಸಾಧನೆಯಾಗದೆ ಅವರು ತಿಳಿಸಿಕೊಟ್ಟ ಸಾರ ಅರಿತು ನಡೆಯೋಣ ಎಂದು ಪ್ರಾಧ್ಯಾಪಕರಿಗೆ ಸಲಹೆಯಿತ್ತರು.
ಭಾರತ ಶಾಂತಿಯ ನಾಡು ಎನ್ನಿಸಿಕೊಳ್ಳಲು ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಕಾರಣವಾಗಿವೆ, ಭಾರತೀಯ ಸಂಸ್ಕೃತಿಯ ಅನಾವರಣ ಈ ಮಹಾಕಾವ್ಯದಲ್ಲಿ ಆಗಿದೆ, ಶ್ರವಣಕುಮಾರನ ಮೂಲಕ ಪಾಲಕರ ಪ್ರೇಮ ಹಾಗೂ ಭಾತೃತ್ವದ ಮಹತ್ವವನ್ನು ರಾಮ, ಭರತ, ಲಕ್ಷ್ಮಣರ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಇತಿಹಾಸ ಪ್ರಾಧ್ಯಾಪಕ ಪ್ರೊ.ಎಲ್.ಪಿ.ರಾಜು ಬಣ್ಣಿಸಿದರು.
ಕಲಾ ಕಾಲೇಜು ಪ್ರಾಚಾರ್ಯ ರಾಮಚಂದ್ರಪ್ಪ, ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರಶುರಾಮ್, ವಿಜ್ಞಾನ ಕಾಲೇಜು ಪ್ರಾಚಾರ್ಯೆ ಪ್ರೊ.ಶಾಲಿನಿ, ಬಡಕಟ್ಟು ಅಧ್ಯಯನ ಕೇಂದ್ರದ ಸಂಯೋಜಕ ಶ್ರೀನಿವಾಸ್, ಪ್ರೊ.ಬಸವರಾಜು, ಸಹಾಯಕ ಪ್ರಾಧ್ಯಾಪಕ ರಾಮಕೃಷ್ಣ, ಡಾ.ನಾಗರಾಜು, ಸಂಶೊಧನಾ ಸಹಾಯಕ ಲಕ್ಷ್ಮೀರಂಗಯ್ಯ ಇತರರಿದ್ದರು.
ಸಂಶೋಧನೆಗಳ ಅಗತ್ಯವಿದೆ : ಭಾರತೀಯರು ಪ್ರತಿದಿನ ನೆನೆಯುವ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಹೆಚ್ಚು ಸಂಶೋಧನೆಗಳ ಅಗತ್ಯವಿದೆ, ಮಹರ್ಷಿಯ ಕಾಲಘಟ್ಟದ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿದ್ದು ತುಮಕೂರು ವಿವಿ ಕೂಡ ಈ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆಗೆ ಒತ್ತು ನೀಡಲಿದೆ, ವಾಲ್ಮೀಕಿ ಏಕೆ ಸಾರ್ವಕಾಲಿಕ ಎಂಬುದನ್ನು ಜಗತ್ತಿಗೆ ತಿಳಿಸುವ ಅಗತ್ಯವಿದೆ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಕೊಟ್ರೇಶ್ ಅಭಿಪ್ರಾಯಪಟ್ಟರು.
ಕೃತಿಗಳ ಮೂಲಕ ಪರಿಚಯವಾಗುವ ಸಾಧಕರ ಸಾಲಿನಲ್ಲಿ ವಾಲ್ಮೀಕಿ ಅವರಿದ್ದಾರೆ, ರಾಮಾಯಣ ಮಹಾಕಾವ್ಯದ ಚರ್ಚೆ ತರಹೇವಾರಿಯಾಗಿವೆ, ಮೂಲ ರಾಮಾಯಾಣದಲ್ಲಿ ಸ್ತ್ರೀ ಗೌರವ ಎತ್ತಿಹಿಡಿದ ಹೆಗ್ಗಳಿಕೆ ವಾಲ್ಮೀಕಿಗೆ ಸಲ್ಲಬೇಕು, ಇವರನ್ನು ಸ್ಮರಿಸುವುದು ಭಾರತೀಯ ಸಂಸ್ಕೃತಿಯನ್ನೇ ನೆನೆದಂತೆ ಎಂದರು.
ಡಿಸಿ ಕಚೇರಿಯಲ್ಲಿ ಸರಳ ಆಚರಣೆ
ಜಿಲ್ಲಾಡಳಿತದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು. ಶ್ರೀಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ರಾಮಾಯಣ ಕರ್ತೃವನ್ನು ಸ್ಮರಿಸಲಾಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುವಾರ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಗದೀಶ್, ಡಿಎಚ್‌ಓ ನಾಗೇಂದ್ರಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರೇವಾ ಇದ್ದರು.