ಮಳವಳ್ಳಿ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ವಾಲ್ಮೀಕಿ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಲೋಕೇಶ್, ಶ್ರೀನಿವಾಸ್, ಉಮಾ, ಸಂತೋಷ್ ಕುಮಾರ್, ಶಿವಮಾದಯ್ಯ ಇದ್ದರು. 
ಜಿಲ್ಲೆ

ಮಳವಳ್ಳಿಯಲ್ಲಿ ಜಯಂತಿ ಆಚರಣೆ

ನಾಗೇಶ ಎಸ್

ಮಳವಳ್ಳಿ: ಪಟ್ಟಣದ ತಾಲೂಕು ಆಳಿತದ ವತಿಯಿಂದ ಮಂಗಳವಾರ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಡಾ. ವಿ.ಎಸ್.ಲೋಕೇಶ್, ಮಹರ್ಷಿ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಗೆ ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವಶ್ರೇಷ್ಠ ಸ್ಥಾನಮಾನ ತಂದುಕೊಟ್ಟವರು ವಾಲ್ಮೀಕಿ. ವಿಶ್ವದ ಎಲ್ಲ ಗ್ರಂಥಗಳಿಗಿಂತಲೂ ಅತ್ಯಂತ ಶ್ರೇಷ್ಠ ಹಾಗೂ ಪುರಾತನವಾದ ಮಹಾಕಾವ್ಯ ರಾಮಾಯಣ. ಇದು ಪ್ರತಿ ಜೀವಕುಲದ ಬುನಾದಿಯಾಗಿದೆ ಎಂದರು.

ತಾಪಂ ಇಒ ಶ್ರೀನಿವಾಸ್ ಮಾತನಾಡಿ, ಆದರ್ಶ ಸಂಬಂಧಗಳ ಮೌಲ್ಯವನ್ನು ಸಮಾಜಕ್ಕೆ ತೋರಿಸಿಕೊಟ್ಟ ಮೊದಲ ಮಹಾಕಾವ್ಯ ವಾಲ್ಮೀಕಿ ರಾಮಾಯಣ. ರಾಮಾಯಣದಲ್ಲಿ ರಾಮ ಒಂದು ಪಾತ್ರವಾಗಿದ್ದು, ಈ ಪಾತ್ರದ ಪರಿಕಲ್ಪನೆ ಕೊಟ್ಟಿರುವ ವಾಲ್ಮೀಕಿ ಮಹರ್ಷಿಗಳ ಹೆಸರು ಹೆಚ್ಚು ಪ್ರಚಲಿತಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿ ಎಂದು ವಿಷಾಧಿಸಿದರು.

ಇದೇ ಸಂದರ್ಭದಲ್ಲಿ ಗಂಗಾಮತ ಸಮಾಜದ ಹಿರಿಯ ಯಜಮಾನರು, ವಿವಿಧ ಕ್ಷೇತ್ರದ ಸಾಧಕರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಶಿಕ್ಷಕ ಶಿವಮಾದಯ್ಯ ಇದ್ದರು.