ಹೊಳೆನರಸೀಪುರ: ವಾಲ್ಮೀಕಿ ಮಹರ್ಷಿಗಳು ಎಲ್ಲ ಕಾಲಘಟ್ಟದಲ್ಲೂ ಅನ್ವಯವಾಗುವಂತಹ ರಾಮಾಯಣ ಗ್ರಂಥವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಗಣಪತಿ ಪೆಂಡಾಲ್ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶ್ರಿಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅವರ ಆದರ್ಶಗಳು ಇಂದಿಗೂ ಸಮಾಜದಲ್ಲಿ ಪ್ರಸ್ತುತವಾಗಿವೆ. ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ರಾಮಾಯಣ ಗ್ರಂಥದಲ್ಲಿ ಜೀವನಕ್ಕೆ ಅದ್ಭುತ ವಿಷಯಗಳಿವೆ. ತಿಳಿದು ನಡೆದುಕೊಳ್ಳುವಂತಹ ಮಾರ್ಗದರ್ಶನಗಳಿವೆ. ವಾಲ್ಮೀಕಿ ಮಹರ್ಷಿಗಳು ತಿಳಿಸಿರುವಂತಹ ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅಧಿಕಾರದ ಅವಧಿಯಲ್ಲಿ ವಾಲ್ಮೀಕಿ ಸಮಾಜದ ಏಳಿಗೆಗೆ ಶ್ರಮಿಸಲಾಗಿದೆ. ಈಗಲೂ ಅವರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದುವರಿಸಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಪ್ರಗತಿಪರ ರೈತ ಅಣ್ಣಯ್ಯನಾಯಕ, ನಂಜಪ್ಪ ನಾಯಕ, ದೇವರಾಜ್ ನಾಯಕ ಅವರನ್ನು ಸನ್ಮಾನಿಸಲಾಯಿತು. ಹಡವನಹಳ್ಳಿ ಪ್ರೌಢಶಾಲೆಯ ಶಿಕ್ಷಕ ಹರಿಕಥಾ ವಿದ್ವಾನ್ ಶಿವಕುಮಾರಾಚಾರಿ, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ತಾಪಂ ಅಧಿಕಾರಿ ಗೋಪಾಲ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಕೃಷಿ ಅಧಿಕಾರಿ ಸಪ್ನಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೌಸರ್ ಅಹಮದ್, ಪುರಸಭೆ ಮಾಜಿ ಅಧ್ಯಕ್ಷರಾದ ಲಕ್ಷ್ಮೀ, ಸುಧಾ ನಳಿನಿ , ಪುರಸಭಾ ಸದಸ್ಯ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.