ಹಾನಗಲ್ಲ: ಆದರ್ಶ ಬದುಕಿನ ವ್ಯಕ್ತಿತ್ವದ ಅನಾವರಣ ಮಾಡುವ ಉತ್ತಮ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ ಮಾನವ ಕುಲಕ್ಕೆ ಅನುಕರಣೀಯರಾಗಿದ್ದಾರೆ ಎಂದು ತಹಸೀಲ್ದಾರ್ ಎಸ್. ರೇಣುಕಮ್ಮ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮಹಾಪುರುಷರ ದಿನಾಚರಣೆಗಳು ಅವರ ವ್ಯಕ್ತಿತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ, ತತ್ವಾದರ್ಶಗಳನ್ನು ಜ್ಞಾಪಿಸಿಕೊಂಡು ಆಚರಿಸುವ ಕಾರ್ಯಕ್ಕೆ ಪ್ರೇರಣೆಯಾಗಿವೆ. ರಾಮಾಯಣ ಮಹಾಕಾವ್ಯ ಎಲ್ಲರಿಗೂ ಪೂಜನೀಯ ಗ್ರಂಥವಾಗಿದೆ. ಸರ್ಕಾರ ಮಹಾಪುರುಷರ ಜಯಂತಿ ಆಚರಿಸುವ ಮೂಲಕ ಸಾಮಾಜಿಕ ನೀತಿಗಳನ್ನು, ಅವರ ಸಂದೇಶಗಳನ್ನು ಪರಿಚಯಿಸುವ ಕಾರ್ಯ ಕೈಗೊಂಡಿದೆ. ಇದು ಆದರ್ಶ ಹಾಗೂ ಮಾರ್ಗದರ್ಶಿಯುತ ಕಾರ್ಯವಾಗಿದೆ ಎಂದರು.
ವಾಲ್ಮೀಕಿ ಸಮಾಜದ ಮುಖಂಡ ಫಕೀರಪ್ಪ ಓಲೇಕಾರ ಮಾತನಾಡಿ, ದಾರಿ ತಪ್ಪಿದ ವಾಲ್ಮೀಕಿಯನ್ನು ಮಹರ್ಷಿ ವಾಲ್ಮೀಕಿ ಮಾಡಿದ ಸಂದರ್ಭದಿಂದಾಗಿ ನಾಡು ಮರೆಯದ ರಾಮಾಯಣ ಮಹಾ ಕಾವ್ಯ ನೀಡಲು ಸ್ಪೂರ್ತಿಯಾಯಿತು. ಮಹರ್ಷಿ ವಾಲ್ಮೀಕಿ ಚರಿತ್ರೆ ಇಂದಿನ ಸಮಾಜಕ್ಕೆ ದೊಡ್ಡ ಪಾಠವಾಗಿದೆ. ಎಲ್ಲ ಕಾಲಕ್ಕೂ ಸಲ್ಲುವ ರಾಮನ ಜೀವನಾದರ್ಶದ ಚರಿತ್ರೆಯನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಹಾಗೂ ವಿಚಾರಗಳು ಪ್ರತಿ ಮನೆ, ಶಾಲೆ, ಮಕ್ಕಳು, ಮಹನೀಯರಿಗೆ ತಲುಪುವ ಮೂಲಕ ಶ್ರೀರಾಮನ ಆದರ್ಶಗಳ ಪರಿಚಯವಾಗಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ಕಾವ್ಯ ಜಗತ್ತಿಗೆ ಅಚ್ಚಳಿಯದ ಕವಿಕುಲ ಸಾರ್ವಭೌಮರಾಗಿ ಮಹಾಕಾವ್ಯ ನೀಡಿದ ಮಹರ್ಷಿ ವಾಲ್ಮೀಕಿ ನಿತ್ಯ ಪೂಜೆಗೆ ಸಲ್ಲುವಂತವರು. ಮತ-ಧರ್ಮಗಳ ಮೇರೆ ಮೀರಿ ಎಲ್ಲರ ಮನದಲ್ಲಿ ಉತ್ಕೃಷ್ಟ ವಿಚಾರಧಾರೆಗಳನ್ನು ಬಿತ್ತಿ, ಆದರ್ಶ ಮೌಲ್ಯಗಳನ್ನು ಅನಾವರಣಗೊಳಿಸಿದ ಹೆಮ್ಮೆಯ ಕವಿ ವಾಲ್ಮೀಕಿಯವರು. ರಾಮಾಯಣದ ಮೂಲಕ ಇಡೀ ಜಗತ್ತಿಗೆ ಒಬ್ಬ ಮಹಾತ್ಮನ ಚರಿತ್ರೆಯನ್ನು ಧಾರ್ವಿುಕ ನೈತಿಕ ಮೌಲ್ಯಗಳ ನೆಲೆಯಲ್ಲಿ ಕಟ್ಟಿಕೊಡುವ ಕೃತಿ ನೀಡಿದ್ದಾರೆ ಎಂದರು.
ವಾಲ್ಮೀಕಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪರಸಪ್ಪ ಮುನಿಯಣ್ಣನವರ, ಹೊನ್ನಪ್ಪ ಅಕ್ಕಿವಳ್ಳಿ, ಸುಭಾಸ ತಳವಾರ, ಸತೀಶ ಅಂಕೋಲ, ಪ್ರಕಾಶ ನಂದಿಕೊಪ್ಪ, ಶಿವಕುಮಾರ ತಳವಾರ, ಮಂಜುನಾಥ ಗುರಣ್ಣನವರ, ಬಸವರಾಜ ಓಲೇಕಾರ, ವಸಂತ ವೆಂಕಟಾಪುರ, ರೇಖಾ ಕರಿಭೀಮಣ್ಣನವರ, ಶಿವಕುಮಾರ ಭದ್ರಾವತಿ, ರಮೇಶ ಕರಿಭೀಮಣ್ಣನವರ, ಶ್ರೀಕಾಂತ ಬೈಚವಳ್ಳಿ, ಹೊನ್ನಪ್ಪ ದೊಡ್ಡಮನಿ, ಗ್ರೇಡ್-2 ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಇಒ ಪರಶುರಾಮ ಪೂಜಾರ, ವಿವಿಧ ಇಲಾಖೆಯ ಅಧಿಕಾರಿಗಳಾದ ಗಂಗಾ ಹಿರೇಮಠ, ಅರವಿಂದ ಸುಗಂಧಿ, ಡಾ.ಗಿರೀಶ ರೆಡ್ಡೇರ, ವೈ.ಕೆ. ಜಗದೀಶ, ಬಿ.ಎನ್. ಸಂಗೂರ, ರವಿ ಅರ್ಕಸಾಲಿ ಇತರರಿದ್ದರು.