ಜಿಲ್ಲೆ

ವಾಲ್ಮೀಕಿ ಜಾತ್ರೆಗೆ ಹಂದರಗಂಬ ಪೂಜೆ

Chitradurga - Desk - Suresh lamani

ಹರಿಹರ: ತಾಲೂಕಿನ ರಾಜನಹಳ್ಳಿಯ ವಾಲ್ಮಿಕಿ ಗುರುಪೀಠದಲ್ಲಿ ಬರುವ ಫೆ.8 ಮತ್ತು 9 ರಂದು ನಡೆಯುವ 7 ನೇ ವರ್ಷದ ವಾಲ್ಮೀಕಿ ಜಾತ್ರೆ ಪ್ರಯುಕ್ತ ಪ್ರಸನ್ನಾನಂದ ಶ್ರೀಗಳು ಮಂಗಳವಾರ ಹಂದರಗಂಬ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶ್ರೀಗಳು ವಾಲ್ಮೀಕಿ ಜಾತ್ರೆಯ ಆರಂಭದ ಉದ್ದೇಶ ಸಫಲವಾಗುತ್ತಿದೆ. ವೈಚಾರಿಕತೆ, ಸಾಮಾಜಿಕ ಪ್ರಜ್ಞೆ ಬೆಳೆಸಲು, ಮೌಢ್ಯ ನಿವಾರಣೆಯ ನಮ್ಮ ಪ್ರಯತ್ನಕ್ಕೆ ಕಾಲ ಕ್ರಮೇಣ ಸಮಾಜ ಬಾಂಧವರು ಸಹಕರಿಸುತ್ತಿದ್ದಾರೆ ಎಂದರು.

ಪ್ರತಿವರ್ಷದಂತೆ ಈ ಬಾರಿಯೂ ಶ್ರೀಮಠದ 27ನೇ ವಾರ್ಷಿಕೋತ್ಸವ, ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀಗಳ 18ನೇ ಪುಣ್ಯಾರಾಧನೆ, ನಮ್ಮ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ಧಾರ್ವಿುಕ ಸಭೆ, ಜನ ಜಾಗೃತಿ ಸಮಾವೇಶ ನಡೆಯಲಿದ್ದು, ನಾಡಿನ ವಿವಿಧ ಮಠಾಧೀಶರು, ಮುಖ್ಯಮಂತ್ರಿ ಸೇರಿ ಸಚಿವರು, ವಿರೋಧ ಪಕ್ಷದ ನಾಯಕರು, ಶಾಸಕರು, ಸಂಸದರು, ವಿದ್ವಾಂಸರು ಆಗಮಿಸಲಿದ್ದಾರೆ ಎಂದರು.

ಜಗಳೂರು ಶಾಸಕ ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ಬಿ.ದೇವೇಂದ್ರಪ್ಪ, ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ ದಾಸಕರಿಯಪ್ಪ, ಧರ್ಮದರ್ಶಿ ಶಕುಂತಲಾ ರಾಜಣ್ಣ, ನಲುವಾಗಲು ನಾಗರಾಜಪ್ಪ, ಕೆ.ಬಿ.ಮಂಜುನಾಥ, ಜಿಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ತಿಮ್ಮೇನಹಳ್ಳಿ ಚಂದ್ರಪ್ಪ, ನಿವೃತ್ತ ಅಧಿಕಾರಿ ಮಾರಪ್ಪ ನಾಯಕ, ಗ್ರಾಪಂ ಅಧ್ಯಕ್ಷೆ ಹೇಮಾವತಿ ರಾಮಪ್ಪ, ಸದಸ್ಯ ನಾಗೇಂದ್ರಪ್ಪ ಇತರರಿದ್ದರು.