ಜಿಲ್ಲೆ

ಕಂದಾಯ ಸಚಿವ ಆರ್. ಅಶೋಕ್ ಜಮ್ಮಾ ಹೇಳಿಕೆಗೆ ಆಕ್ಷೇಪ

reportermys

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡಗಿನ ಬಾಣೆ ಜಾಗಕ್ಕೆ ಸಂಬಂಧಿಸಿದ ಗೊಂದಲ ನ್ಯಾಯಾಲಯದಲ್ಲಿ ನಿವಾರಣೆಯಾಗಿದೆ. ಆದರೆ ಕಂದಾಯ ಸಚಿವರ ಹೇಳಿಕೆ ಯಿಂದ ಗೊಂದಲ ಮತ್ತು ಆತಂಕ ಸೃಷ್ಟಿಯಾಗಿದೆ ಎಂದು ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಜಿಲ್ಲೆಯ ಜಮ್ಮಾ ಜಾಗ ಕುರಿತು ಸರಿಯಾಗಿ ಅರ್ಥ ಮಾಡಿಕೊಂಡು ಸಚಿವರು ಹೇಳಿಕೆ ನೀಡಬೇಕು. ಈಗ ನೀಡಿರುವ ಹೇಳಿಕೆ ವಾಪಾಸ್ಸು ಪಡೆದು, ಜಿಲ್ಲೆಯ ಜನ ನಿಶ್ಚಿಂತೆಯಿಂದ ಬದುಕುವಂತೆ ನೋಡಿಕೊಳ್ಳಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಬೆಳೆಗಾರರ ಜಮ್ಮಾ ಜಾಗದ ಮೇಲೆ ಸರ್ಕಾರ ಹಿಡಿತ ಸಾಧಿಸುವುದು ಸರಿಯಲ್ಲ. ಜಮ್ಮಾ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡ ಲಾಗುವುದೆಂದು ಸಚಿವರು ಹೇಳಿಕೆ ನೀಡಿರುವುದು ಅರ್ಥಹೀನ. ೧೯೯೨ ರಲ್ಲಿ ಚಕ್ಕೇರ ಪೂವಯ್ಯ ಪ್ರಕರಣ ಸಂದರ್ಭವೇ ನ್ಯಾಯಾಲಯ ಜಮ್ಮಾ ಹಿಡುವಳಿದಾರರ ಪರ ತೀರ್ಪು ನೀಡಿದೆ. ಅಲ್ಲದೆ ರಾಜ್ಯವ್ಯಾಪಿ ಕಂದಾಯ ಕಾನೂನು ಒಂದೇ ಆಗಿದ್ದು, ಕೊಡಗಿಗೆ ಪ್ರತ್ಯೇಕ ಕಾನೂನಿಲ್ಲ. ವಿನಾಕಾರಣ ಮತ್ತೆ ಮತ್ತೆ ಜಮ್ಮಾ ಭೂಮಿ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಜನರಲ್ಲಿ ಆತಂಕ ಮೂಡಿಸು ವುದು ಸರಿಯಲ್ಲ ಎಂದಿದ್ದಾರೆ.

ಅಧಿಕಾರಿಗಳು ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದರೆ ಸರಿಯಾದ ಮಾಹಿತಿಯನ್ನು ಕಾನೂನಾತ್ಮಕವಾಗಿ ಕಲೆ ಹಾಕಿ ಮುಂದಿನ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಏಕಾಏಕಿ ಗುತ್ತಿಗೆ ಆಧಾರದಲ್ಲಿ ಜಮ್ಮಾ ಜಾಗ ನೀಡುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ. ತಕ್ಷಣ ಈ ಹೇಳಿಕೆ ಹಿಂಪಡೆಯದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.