ವಿಜಯವಾಣಿ ಸುದ್ದಿಜಾಲ ಪುತ್ತೂರು
ಪಂಚಾಯಿತಿ ಕೊಳವೆಬಾವಿಯನ್ನು ಸ್ಥಳೀಯರೊಬ್ಬರು ತಮ್ಮ ಕಟ್ಟಡಕ್ಕೆ ತೊಂದರೆಯಾಗುತ್ತದೆಂದು ಮುಚ್ಚಿದ್ದಾರೆಂದು ಸ್ಥಳೀಯರು, ಗುತ್ತಿಗಾರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಗುತ್ತಿಗಾರು ಗ್ರಾಮದ ಎರಡನೇ ವಾರ್ಡ್ ವಳಲಂಬೆ-ಕಲ್ಚಾರು ರಸ್ತೆ ಬದಿ ಗುತ್ತಿಗಾರು ಪಂಚಾಯಿತಿ ಕೊಳವೆಬಾವಿ ಕೊರೆಸಿದ್ದು, ಕೆಲವು ವರ್ಷಗಳಿಂದ ಕೈಪಂಪ್ ಅಳವಡಿಸಿ ಸಾರ್ವಜನಿಕರಿಗೆ, ಗ್ರಾಮಸ್ಥರಿಗೆ, ದೇವಳಕ್ಕೆ ಬರುವ ಭಕ್ತರಿಗೆ ಉಪಯೋಗಕ್ಕೆ ಲಭ್ಯವಾಗಿತ್ತು. ಬೇಸಿಗೆ ಸಂದರ್ಭ ಸ್ಥಳೀಯರಿಗೆ ಈ ಕೊಳವೆಬಾವಿಯೇ ನೀರಿನ ಮೂಲವಾಗಿತ್ತು. ಈ ಕೊಳವೆಬಾವಿಯನ್ನು ಪಂಚಾಯಿತಿ ಒಪ್ಪಿಗೆ ಪಡೆಯದೆ, ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳದೆ ಜುಲೈ 11ರ ರಾತ್ರಿ ಮುಚ್ಚಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಪಂಚಾಯಿತಿ ಕೊಳವೆಬಾವಿ ಹಾಳುಗೆಡವಿರುವುದು ಬೆಳಕಿಗೆ ಬಂದಿದ್ದರೂ ಸೂಕ್ತ ಕ್ರಮಕೊಂಡಿಲ್ಲ. ಮುಚ್ಚಲಾದ ಕೊಳವೆಬಾವಿಯನ್ನು ಹಿಂದೆ ಇದ್ದ ಜಾಗಲ್ಲಿಯೇ ಮರು ನಿರ್ಮಾಣ ಮಾಡಬೇಕು ಮತ್ತು ಸಾರ್ವಜನಿಕರ ಉಪಯೋಗಕ್ಕೆ ಅನುಕೂಲವಾಗುವ ರೀತಿ ಸಿದ್ಧಪಡಿಸಿಕೊಡಬೇಕೆಂದು ಗ್ರಾಮಸ್ಥರು ಪಂಚಾಯಿತಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಕೊಳವೆಬಾವಿಯನ್ನು ಯಾವುದೇ ಮಾಹಿತಿಯಿಲ್ಲದೆ ಮುಚ್ಚಿದ ವಿಚಾರವನ್ನು ಸ್ಥಳೀಯ ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಕೊಳವೆಬಾವಿ ಮುಚ್ಚಿದಾತ ಸ್ಥಳೀಯ ನಿವಾಸಿಗಳಿಗೆ ಕರೆ ಮಾಡಿ ಧಮ್ಕಿ ಹಾಕುವ ಧ್ವನಿಸುರುಳಿ ಹಾಗೂ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಳವೆಬಾವಿ ಕಾಣೆಯಾಗಿರುವ ವಿಚಾರದ ಬಗ್ಗೆ ಸ್ಥಳೀಯ ಫಲಾನುಭವಿಗಳು ‘ಕೊಳವೆಬಾವಿ ಹುಡುಕಿಕೊಡಿ’ ಅಭಿಯಾನ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಪಂಚಾಯಿತಿ ಕೊಳವೆಬಾವಿಗೆ ಅಳವಡಿಸಿದ್ದ ಕೈಪಂಪ್ ಅನ್ನು ಪಂಚಾಯಿತಿಗೆ ಮರಳಿಸುವ ಕಾರ್ಯ ನಡೆದಿಲ್ಲ. ಚುನಾಯಿತ ಪ್ರತಿನಿಧಿಗಳ ಸಭೆ ನಡೆಸದೆ ಕೊಳವೆಬಾವಿ ತೆರವುಗೊಳಿಸಿರುವುದು ಕಾನೂನು ವಿರೋಧಿ ಚಟುವಟಿಕೆಯಾಗಿದೆ. ಕುಡಿಯುವ ನೀರಿನ ಯೋಜನೆ ಅಧಿಕಾರಿಗಳು ಪ್ರಕರಣ ಗಂಭೀರವಾಗಿ ಪರಿಗಣಿಸುತ್ತಾರಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ವಿಚಾರಣೆ ಸಂದರ್ಭ ಕೊಳವೆಬಾವಿ ಸುಮಾರು 30 ವರ್ಷಗಳ ಹಿಂದಿನದ್ದು ಎಂದು ತಿಳಿದು ಬಂದಿದೆ. ಪಂಚಾಯಿತಿ ಪಟ್ಟಿಯಲ್ಲಿ ಇತ್ತಾ ಬಗ್ಗೆ ಮಾಹಿತಿ ಇಲ್ಲ. ಕೊಳವೆಬಾವಿ ತೆರವಿನ ಬಗ್ಗೆ ದೂರು ಬಂದಿದ್ದು, ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ, ಗ್ರಾಪಂ ಸಭೆಯಲ್ಲಿ ಚರ್ಚೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. -ಧನಪತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗುತ್ತಿಗಾರು ಗ್ರಾಪಂ https://www.vijayavani.net/bridge-problem-in-devasya https://www.vijayavani.net/sea-erosion-permanent-project-plan-cm-siddaramayya