ಜಿಲ್ಲೆ

ವಾಜಪೇಯಿ ಕೊಡುಗೆ ಅಪಾರ

ರೇಷ್ಮೆ ನಗರ ಡೆಸ್ಕ್

ಅಟಲ್ ವಿರಾಸತ್ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ | ರಾಜ್ಯ ಬಿಜೆಪಿ ವಕ್ತಾರ ಪ್ರಕಾಶ್ ಹೇಳಿಕೆ

ರಾಮನಗರ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಬದುಕನ್ನು ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದರು ಎಂದು ರಾಜ್ಯ ಬಿಜೆಪಿ ವಕ್ತಾರ ಪ್ರಕಾಶ್ ತಿಳಿಸಿದರು.

ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಗುರುವಾರ ಆಯೋಜಿಸಿದ್ದ ಅಟಲ್ ವಿರಾಸತ್ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಆರ್‌ಎಸ್‌ಎಸ್ ಸಂಘಟನೆ, ಜನಸಂಘ ಸ್ಥಾಪನೆಯ ಮುಖಾಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಸದಸ್ಯರಾಗಿ ವಿರೋಧ ಪಕ್ಷದ ನಾಯಕರಾಗಿ, ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಅವರು ಅಪ್ಪಟ ದೇಶಪ್ರೇಮಿ, ಕವಿ, ಸಾಹಿತಿ, ವಿದ್ವಾಂಸ, ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಚತುಷ್ಪದ ರಸ್ತೆ, ದೇಶದ ಉದ್ದಗಲಕ್ಕೂ ನಡೆದು ಪ್ರತಿ ಹಳ್ಳಿಗೆ ಪ್ರಧಾನ ಮಂತ್ರಿ ಸಡಕ ಯೋಜನೆ, ಮಕ್ಕಳ ಶಿಕ್ಷಣಕ್ಕಾಗಿ ಸರ್ವ ಶಿಕ್ಷಣ ಅಭಿಯಾನ, ಪ್ರತಿ ಮನೆಗೂ ಗ್ಯಾಸ್ ಸಿಲಿಂಡರ್ ಸಿಗುವ ಸೌಲಭ್ಯಗಳನ್ನು ಮಾಡಿದ್ದಾರೆ. ಅವರ ರಾಜಕಾರಣ ಆದರ್ಶಗಳಿಂದ ಕೂಡಿತ್ತು. ಸಮರ್ಥ, ಸ್ವಾಭಿಮಾನಿ ಭಾರತ ಕಟ್ಟುವುದು ಅವರ ಕನಸಾಗಿತ್ತು ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ ಮಾತನಾಡಿ, ಅಟಲ್ ಜೀ ಅವರನ್ನು ಎಷ್ಟು ಕೊಂಡಾಡಿದರೂ ಸಾಲದು. ಅವರ ಮಾರ್ಗದರ್ಶನದಲ್ಲಿ ಪಕ್ಷ ಬೆಳೆದಿದೆ. ಇಂದು ಜಿಲ್ಲೆಯ 60 ಜನ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದ್ದು, ಮತ್ತಷ್ಟು ಸಂಘಟನೆಗೆ ಒತ್ತು ಕೊಟ್ಟಿದ್ದು, ಪ್ರತೀ ಬೂತ್ ಮಟ್ಟದಲ್ಲಿ ಮತ್ತಷ್ಟು ಪಕ್ಷ ಸಂಘಟಿಸಿ ಬಲ ತುಂಬಲಾಗುತ್ತದೆ ಎಂದರು.

ಅಟಲ್ ಅವರ ಜೀವನ ಎಂದೂ ಮುಚ್ಚಿದ ಪುಸ್ತಕವಾಗಿರಲಿಲ್ಲ. ಎಲ್ಲವೂ ಮುಕ್ತವಾಗಿತ್ತು. ದೇಶ ಸೇವೆ ಮಾತ್ರ ಅವರಲ್ಲಿತ್ತು. ಅವರ ಬದುಕು ತೆರೆದ ಕಿಟಕಿಯಾಗಿತ್ತು. ಈ ಕಾರಣದಿಂದಾಗಿಯೇ ಅವರು ಇಡೀ ಭಾರತದ ನಾಯಕರಾದರು. ತಮ್ಮ ರಾಜಕೀಯ ಎದುರಾಳಿಗಳನ್ನು ವಿಷಯಾಧರಿತವಾಗಿ ಟೀಕಿಸುತ್ತಿದ್ದರು. ಅಂತಹ ಮಹಾನ್ ನಾಯಕನ ಮಾರ್ಗದರ್ಶನದಲ್ಲಿ ಪಕ್ಷ ದೇಶದಲ್ಲಿ ಸದೃಢವಾಗಿ ಹೆಮ್ಮರವಾಗಿ ಇಂದು ಬೆಳೆದಿದೆ ಎಂದು ರೇಷ್ಮೆ ನಿಗಮ ಮಾಜಿ ಅಧ್ಯಕ್ಷ ಗೌತಮ್‌ಗೌಡ ತಿಳಿಸಿದರು.

ಬಿಜೆಪಿ ರಾಜ್ಯ ಹಿರಿಯ ಪ್ರಕೋಷ್ಟ ಸಂಚಾಲಕ ಸದಾಶಿವಯ್ಯ, ಮಹಿಳಾ ಬಿಜೆಪಿ ಘಟಕ ಅಧ್ಯಕ್ಷೆ ಪುಷ್ಪಲತಾ, ಮುಖಂಡರಾದ ಪ್ರಸಾದ್‌ಗೌಡ, ರುದ್ರದೇವರು, ಸುರೇಶ್, ಜಗನ್ನಾಥ್, ಶಿವಾನಂದ್, ಚಂದ್ರಶೇಖರ್, ಕಿಶನ್, ಕಾಳಯ್ಯ, ನಾಗರಾಜು ಮತ್ತಿತರರು ಇದ್ದರು.