ಜಿಲ್ಲೆ

ವೈಶ್ಯವಾಣಿ ಸಮಾಜ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಆಗ್ರಹ

ಗೋಪಾಲಕೃಷ್ಣ ಪಾದೂರ್
ಉಡುಪಿ: ವೈಶ್ಯ ವಾಣಿ ಸಮುದಾಯವನ್ನು ಒಬಿಸಿಗೆ ( ಇತರ ಹಿಂದುಳಿದ ವರ್ಗ) ಸೇರ್ಪಡೆ ಮಾಡಿ ರಾಜ್ಯ ಸರ್ಕಾರ 2023ರಲ್ಲಿ ಆದೇಶ ಹೊರಡಿಸಿದ್ದರೂ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು ಅಗತ್ಯವಿರುವ ಜಾತಿ ಪ್ರಮಾಣಪತ್ರಗಳನ್ನು ತಹಸೀಲ್ದಾರ್​ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀಡುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಗಜೆಟ್​  ನೋಟಿಫಿಕೇಶನ್​ ಹೊರಡಿಸಬೇಕು ಎಂದು ಸಮಾಜದ ಜಿಲ್ಲಾಧ್ಯಕ್ಷ ವಸಂತ ಕೆ. ನಾಯಕ್​ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಉಡುಪಿ ಜಿಲ್ಲಾ ವೈಶ್ಯವಾಣಿ ಸಮಾಜ ಸಮುದಾಯ ಸಂಟನೆ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ಕಳೆದ 30 ವರ್ಷಗಳಿಂದ ನಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತ ಬಂದಿದ್ದೇವೆ. 2013ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಂದಿನ ಅಧ್ಯಕ್ಷ ಎಂ.ರಂಕ್ರಪ್ಪ ಅವರು ನಮ್ಮ ಸಮುದಾಯದ ಸಮೀಕ್ಷೆ ಮಾಡಿ ವೈಶ್ಯವಾಣಿ ಸಮುದಾಯವನ್ನು ಒಬಿಸಿ ಪ್ರವರ್ಗ 2ಡಿಗೆ ಸೇರ್ಪಡಿಸಬೇಕೆಂದು ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಜಾರಿಗೆ ಬಾರದೆ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳಿಗೆ ಸೂಕ್ತ ಜಾತಿ ಪ್ರಮಾಣಪತ್ರ ಸಿಗದೆ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಆದೇಶವನ್ನು ಗಜೆಟ್​ ನೋಟಿಫಿಕೇಶನ್​ ಮೂಲಕ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮೂಲಕ ಮನವಿ ಸಲ್ಲಿಸಲಾಯಿತು.  ಉಡುಪಿ ಜಿಲ್ಲಾ ವೈಶ್ಯ ವಾಣಿ ಸಮಾಜ ಸಮುದಾಯದ ಮುಖಂಡರಾದ ಸುಭಾಶ್ಚಂದ್ರ ಶೇಟ್​, ವೆಂಕಟೇಶ್​ ನಾಯ್ಕ್​, ಮಂಜುನಾಥ್​ ಶೇಟ್​ ಗುಡ್ಡಮ್ಮಡಿ, ಕೋಟೇಶ್ವರ ಮಹೇಶ್​ ಶೇಟ್​, ರಾಜೇಶ್​ ಜಿ.ಶೀಟ್​ ಉಡುಪಿ, ಭಾಗ್ಯಲಕ್ಷಿ$್ಮ ಜಿ.ನಾಯ್ಕ್​ ಬೈಂದೂರು, ಮಂಜುಳಾ ವಿ.ನಾಯಕ್​, ಅರುಣಾ ಶೇಟ್​ ಹೆಬ್ರಿ, ಹರೀಶ್​ ಗಾವುಸ್​ ಮೊದಲಾದವರು ಉಪಸ್ಥಿತರಿದ್ದರು.