ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗುವ ವೈರಮುಡಿ ಉತ್ಸವದಲ್ಲಿ ಯಾವುದೇ ಲೋಪವಾದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೈರಮುಡಿ ಉತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏ.2ರಿಂದ 14ರವರೆಗೆ ವಿವಿಧ ಪೂಜಾ ಕೈಂಕರ್ಯ ನಡೆಯಲಿದೆ. ಏ.7ರಂದು ನಡೆಯಲಿರುವ ವೈರಮುಡಿ ಉತ್ಸವದಲ್ಲಿ ಲಕ್ಷಾಂತರ ಭಕ್ತಾಗಳು ಭಾಗವಹಿಸಲಿದ್ದಾರೆ ಎಂದರು.
ಬೇಸಿಗೆ ಬಿಸಿಲಿನ ತಾಪ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವುದರ ಜತೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಈಗಿನಿಂದಲೇ ಕಾರ್ಯಪ್ರೌವೃತ್ತರಾಗಬೇಕು. ಕುಡಿಯುವ ನೀರು, ದಾಸೋಹ ಭವನದಲ್ಲಿ ಆಹಾರ ವಿತರಣೆ ಹಾಗೂ ಪ್ರಸಾದ ವಿತರಣೆ ಭಾಗಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಿ ಪರೀಕ್ಷೆಗೆ ಒಳಪಡಿಸಿದ ನಂತರವೇ ವಿತರಣೆಯಾಗಬೇಕು. ಮೇಲುಕೋಟೆಗೆ ವಿವಿಧ ಭಾಗಗಳಿಂದ ಸಂಪರ್ಕಿಸುವ ರಸ್ತೆಗಳ ದುರಸ್ತಿ ಕೆಲಸಗಳು ವೇಗವಾಗಿ ನಡೆಸಿ ಪೂರ್ಣಗೊಳಿಸಬೇಕು. ವಾಹನ ನಿಲುಗಡೆ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ತಿಳಿಸಿದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಮಾತನಾಡಿ, ಕುಡಿಯುವ ನೀರಿನ ಟ್ಯಾಂಕರ್ ದೇವಸ್ಥಾನದ ಸುತ್ತಲೂ, ಕಲ್ಯಾಣಿ, ಪಾರ್ಕಿಂಗ್ ಸ್ಥಳ ಸೇರಿದಂತೆ ಜನಸಂದಣಿ ಇರುವ ಸ್ಥಳಗಳಲ್ಲಿ ವ್ಯವಸ್ಥೆಯಾಗಬೇಕು. ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ವೈರಮುಡಿ ಉತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ದಾಸೋಹ ಭವನ ಪ್ರಾರಂಭವಾಗಿರುವ ಬಗ್ಗೆ ಮಾಹಿತಿ ನೀಡಲು ದೇವಸ್ಥಾನದ ಸುತ್ತಲೂ ಸೂಚನಾ ಲಕ ಅಳವಡಿಸಿ. ದಾಸೋಹ ಭವನದಲ್ಲಿ ಜನಸಂದಣಿಯಾಗದಂತೆ ಬ್ಯಾರಿಕೇಡಿಂಗ್ ಆಗಬೇಕು. ದಾಸೋಹಕ್ಕೆ ಬೇಕಿರುವ ಆಹಾರ ಸಾಮಗ್ರಿಗಳ ದಾಸ್ತಾನು ಆಗಬೇಕು. ದೇವಸ್ಥಾನ ಸುತ್ತ ಹೆಚ್ಚಿನ ಟ್ರಾನ್‌ಸ್ಾರ್ಮರ್ ಬೇಕಿದ್ದಲ್ಲಿ ವ್ಯವಸ್ಥೆ ಮಾಡಿಕೊಳ್ಳಿ. ಅಗತ್ಯವಿರುವ ಕಡೆ ಹೆಚ್ಚಿನ ವಿದ್ಯುತ್ ದೀಪಗಳ ವ್ಯವಸ್ಥೆಯಾಗಬೇಕು. ಕಲ್ಯಾಣಿಗಳ ಸ್ವಚ್ಛತೆಯನ್ನು ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಈ ಬಾರಿ 19 ಲಕ್ಷ ರೂ ವೆಚ್ಚದಲ್ಲಿ ಶಾಶ್ವತವಾಗಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗುವುದು. ಇದನ್ನು ವೀಕ್ಷಿಸಲು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಕಲ್ಯಾಣಿಗಳ ಬಳಿ ನುರಿತ ಈಜುಗಾರರನ್ನು ನೇಮಿಸಬೇಕು. ಕಲ್ಯಾಣಿಯ ಹತ್ತಿರ ವಿದ್ಯುತ್ ದೀಪಗಳು ಹಾಗೂ ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಾಯಿಸಲು ಶೆಡ್‌ಗಳ ನಿರ್ಮಾಣವಾಗಬೇಕು ಎಂದರು.
ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಪಾಂಡವಪುರ ಉಪವಿಭಾಗಾಕಾರಿ ಶ್ರೀನಿವಾಸ್ ಇದ್ದರು.