ನಾಗಮಂಗಲ; ತಾಲೂಕಿನಾದ್ಯಂತ ಶುಕ್ರವಾರ ವಿಷ್ಣು ದೇವಾಲಯಗಳು ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರದೊಂದಿಗೆ ಸಕಲ ಭಕ್ತಿಭಾವಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಐತಿಹಾಸಿಕ ಶ್ರೀಸೌಮ್ಯಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಗುರುವಾರ ಸಂಜೆಯಿಂದಲೇ ದೇವಾಲಯದ ಅಲಂಕಾರ ಸೇರಿದಂತೆ ವಿಶೇಷ ಪೂಜೆಗೆ ದೇವಾಲಯದ ಸಿಬ್ಬಂದಿ ಅಗತ್ಯವಾದ ಪೂರಕ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ದೇವಾಲಯಕ್ಕೆ ಮುಂಜಾನೆ ಬೆಳಗಿನ ಜಾವದಿಂದಲೇ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ದೇವಾಲಯದ ಪ್ರಾಂಗಣದಲ್ಲಿ ವೈಕುಂಠ ಮಹಾದ್ವಾರವನ್ನು ನಿರ್ಮಿಸಲಾಗಿದ್ದು, ಜನರು ಸರತಿ ಸಾಲಿನಲ್ಲಿ ಆಗಮಿಸಿ ಸರ್ವಾಲಂಕೃತ ಸೌಮ್ಯಕೇಶವಸ್ವಾಮಿಯನ್ನು ದರ್ಶನ ಪಡೆದರು. ದೇವಾಲಯದಲ್ಲಿ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯದ ವತಿಯಿಂದ ದೇವಾಲಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಲಾಡು ಸೇರಿದಂತೆ ಪ್ರಸಾದವನ್ನು ವಿತರಿಸಲಾಯಿತು. ವಾದ್ಯಗೋಷ್ಠಿಯನ್ನು ಆಯೋಜಿಸಲಾಗಿದ್ದು, ವಿವಿಧ ಬಗೆಯ ವಾದ್ಯಗಳು ಎಲ್ಲರ ಗಮನ ಸೆಳೆದವು. ವೈಕುಂಠ ಏಕಾದಶಿಯ ಅಂಗವಾಗಿ ಸೌಮ್ಯಕೇಶವಸ್ವಾಮಿ ತೋಮಾಲೆ ಸೇವೆ, ಅಭಿಷೇಕ ಸೇವೆಗಳನ್ನು ನೆರವೇರಿಸಲಾಯಿತು. ಪಟ್ಟಣದಲ್ಲಿ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲೂ ಸಹ ವೈಕುಂಠ ಮಹಾದ್ವಾರವನ್ನು ವಿಶೇಷ ಅಲಂಕಾರದೊಂದಿಗೆ ನಿರ್ಮಿಸಲಾಗಿತ್ತು. ಉಪ್ಪಾರಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ ಮತ್ತು ಅಲಂಕಾರ ಸೇವೆ ನಡೆಯಿತು. ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸಲಾಯಿತು.
ವಿವಿಧೆಡೆ ಆಚರಣೆ: ತಾಲೂಕಿನ ಬೆಳ್ಳೂರು ಹೋಬಳಿಯ ಸಣಬ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ 3ನೇ ವರ್ಷದ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇವಾಲಯದಲ್ಲಿ ಸಪ್ತದ್ವಾರದಿಂದ ವೈಕುಂಠ ನಾರಾಯಣ ಅಲಂಕರಾದೊಂದಿಗೆ ದೇವರ ದರ್ಶನ ಪಡೆಯುವಂತಹ ವ್ಯವಸ್ಥೆಯನ್ನು ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಅಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಶುಕ್ರವಾರ ರಾತ್ರಿ ಅನ್ನಸಂತರ್ಪಣೆ ಹಾಗೂ ಹರಿಕಥೆ ಆಯೋಜಿಸಲಾಗಿತ್ತು. ತಾಲೂಕಿನ ಹೊಣಕೆರೆ ಹೋಬಳಿಯ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿಯೂ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಆಚರಿಸಿ ಅನ್ನಸಂತರ್ಪಣೆ ನಡೆಯಿತು.