ಜಿಲ್ಲೆ

10 ರಂದು ಮಾಲೆಕಲ್ಲು ತಿರುಪತಿಯಲ್ಲಿ ವೈಕುಂಠ ಏಕಾದಶಿ

ಎ. ಆರ್. ರಘುರಾಮ

 ಅರಸೀಕೆರೆ ಗ್ರಾಮಾಂತರ : ತಾಲೂಕಿನ ಇತಿಹಾಸ ಸುಪ್ರಸಿದ್ಧ ಯಾತ್ರಾ ಸ್ಥಳ ಮಾಲೆಕಲ್ಲು ತಿರುಪತಿಯಲ್ಲಿ ಜ. 10 ರಂದು ವೈಕುಂಠ ಏಕಾದಶಿ ಆಚರಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಅಂದು ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಗೆ ನಸುಕಿನಲ್ಲೇ ಸುಪ್ರಭಾತ ಸೇವೆ, ಮಹಾಭಿಷೇಕ, ವಿಶೇಷ ಅಲಂಕಾರ ನೆರವೇರಲಿದೆ.

ಅಮ್ಮನವರಿಗೆ ಮತ್ತು ಕೆಂಚರಾಯಸ್ವಾಮಿ- ಗುಂಡಮ್ಮ ನವರಿಗೂಇದೇ ಸಂದರ್ಭ ಪೂಜೆ ಸಮರ್ಪಣೆಯಾಗಲಿದೆ. ರಾಜೋಪಚಾರಸೇವೆ ನಂತರ ಸ್ವಾಮಿಗೆ ದೇವಾಲಯದ ಸಂಪ್ರದಾಯದಂತೆ ವಿಶೇಷ ವಿಧಿ ವಿಧಾನಗಳು, ಉತ್ಸವಗಳು ನಡೆಯಲಿದೆ. ಅರ್ಚಕರಾದ ರಾಮ ಪ್ರಸಾದ್, ವರದರಾಜು, ಗಿರಿಕೇಸರಿ, ಶ್ರೀನಿವಾಸ ಪೂಜಾ ನೇತೃತ್ವ ವಹಿಸಲಿದ್ದಾರೆ.

ವೈಕುಂಠ ಮಂಟಪದಲ್ಲಿ ಬೆಳಗ್ಗೆ 7.30 ರಿಂದ ಸಂಜೆ 6.30 ರವರೆಗೆ ವಿಶೇಷ ಪೂಜಾ ವಿಧಿಗಳನ್ನು ದೇವಾಲಯದ ವತಿಯಿಂದ ನೆರವೇರಿಸಲಾಗುವುದು. ಭಕ್ತರು ಸಾಲಿನಲ್ಲಿ ಬಂದು ವೈಕುಂಠ ದ್ವಾರ ಪ್ರವೇಶ ಮಾಡುವ ಮೂಲಕ ದೇವರ ದರ್ಶನ ಪಡೆಯಬೇಕು ಎಂದು ದೇವಾಲಯದ ಪತ್ತೆದಾರ ಲೋಕೇಶ್ ತಿಳಿಸಿದ್ದಾರೆ. ತಹಸೀಲ್ದಾರ್ ಎಂ. ಜೆ. ಸಂತೋಷ ಕುಮಾರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ, ಜನಪ್ರತಿನಿಧಿಗಳು ಮತ್ತು ವಿವಿಧ ರಂಗದ ಮುಖಂಡರು ದರ್ಶನಕ್ಕೆ ಆಗಮಿಸಲಿದ್ದಾರೆ.