ಜಿಲ್ಲೆ

ರೋಗಿಗಳ ಕೈ ಹಿಡಿಯುವ ಅರೆಯೂರು ಶ್ರೀವೈದ್ಯನಾಥೇಶ್ವರ ; ನಾಡಿನೆಲ್ಲೆಡೆ ಭಕ್ತರನ್ನು ಹೊಂದಿದೆ ದೇವಸ್ಥಾನ

Tumakuru

ತುಮಕೂರು: ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ಹತ್ತಾರು ಆಸ್ಪತ್ರೆಗಳನ್ನು ಎಡತಾಕಿದರೂ ಗುಣಮುಖರಾಗದೆ ಇದ್ದಾಗ ಜನರು ಹೋಗುವುದೇ ತುಮಕೂರು ತಾಲೂಕು ಅರೆಯೂರು ಗ್ರಾಮದ ಶ್ರೀವೈದ್ಯನಾಥೇಶ್ವರ ಸ್ವಾಮಿ ಸನ್ನಿಧಿಗೆ. ಅರೆಯೂರಿನ ಶ್ರೀವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಒಂದು ಸಾವಿರ ವರ್ಷದ ಇತಿಹಾಸವಿದೆ.

ಜಿಲ್ಲಾಕೇಂದ್ರ ತುಮಕೂರಿನಿಂದ 16 ಕಿ.ಮೀ., ದೂರದಲ್ಲಿರುವ ಈ ದೇವಸ್ಥಾನವು ನಾಡಿನೆಲ್ಲೆಡೆ ಭಕ್ತರನ್ನು ಹೊಂದಿದೆ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿನ ಮಲ್ಲಸಂದ್ರ ಗ್ರಾಮದಿಂದ ದಕ್ಷಿಣಕ್ಕೆ 8 ಕಿ.ಮೀ. ದೂರದಲ್ಲಿರುವ ಅರೆಯೂರಿನಲ್ಲಿರುವ ಜ್ಯೋತಿರ್ಲಿಂಗ ಶ್ರೀವೈದ್ಯನಾಥೇಶ್ವರ ಸ್ವಾಮಿ ದೇವರನ್ನು ಅಚಲ ಭಕ್ತಿಯಿಂದ ನಂಬಿ ಪೂಜಿಸಿದರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆಂಬ ಪ್ರತೀತಿ ಇದೆ.

ಪಂಚಲಿಂಗಗಳು: ಪುರಾತನ ಜ್ಯೋತಿರ್ಲಿಂಗ ಸೇರಿ ಅರೆಯೂರು ಗ್ರಾಮದಲ್ಲಿ ಐದು ಲಿಂಗಗಳಿವೆ. ಈ ದೇವಸ್ಥಾನದ ಹಿಂಭಾಗದಲ್ಲಿ ಅರೆಯೂರು ಕೆರೆ ಏರಿಯ ಆಳದಲ್ಲಿ ಉದ್ಭವ ಲಿಂಗರೂಪಿಯಾದ ಶ್ರೀಹಾಲು ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿದೆ. ಇದು ಭೂಮಿಯಿಂದ ಉದ್ಭವಿಸಿದ ಲಿಂಗ. ಇದಲ್ಲದೆ ಗದ್ದುಗೆಪ್ಪ, ಭೀಮೇಶ್ವರ ಮತ್ತು ಹಾದವೇಣಿ ಸ್ವಾಮಿ ಸ್ಥಳದ ಮಹಿಮೆ ಎನಿಸಿವೆ.

ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ವರ್ಷಕ್ಕೊಮ್ಮೆ 8 ದಿವಸಗಳ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರೆಯ ಕೊನೆಯ ದಿವಸ ತೆಪ್ಪೋತ್ಸವವೂ ನಡೆಯುತ್ತದೆ.

ತಲುಪುವ ಮಾರ್ಗ ಹೇಗೆ?: ಶ್ರೀವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ತುಮಕೂರು ನಗರದಿಂದ 16 ಕಿ.ಮೀ., ದೂರದಲ್ಲಿದೆ. ಎನ್‌ಎಚ್-206ರ ಮಲ್ಲಸಂದ್ರದಿಂದ ದಕ್ಷಿಣಕ್ಕೆ 8 ಕಿ.ಮೀ., ದೂರದಲ್ಲಿದೆ. ಪ್ರತಿ ದಿನ ತುಮಕೂರಿನಿಂದ ನೇರ ಸಾರಿಗೆ ಸೌಲಭ್ಯ ಇದೆ. ತುಮಕೂರು ಬಸ್ ನಿಲ್ದಾಣದಿಂದ ಅರೆಯೂರಿಗೆ ಪ್ರತಿ ಗಂಟೆಗೆ ಒಮ್ಮೆಬಸ್ ಬಂದು ಹೋಗುತ್ತವೆ. ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಬಸ್ ಸೌಲಭ್ಯ ಇದೆ. ಮಲ್ಲಸಂದ್ರ ರೈಲು ನಿಲ್ದಾಣವೇ ಅರೆಯೂರಿನ ಸಮೀಪದ ರೈಲು ನಿಲ್ದಾಣವಾಗಿದ್ದು ಇಲ್ಲಿಂದ ದೇವಾಲಯಕ್ಕೆ ಆಟೋ, ಟೆಂಪೋ ವ್ಯವಸ್ಥೆ ಇದೆ.

ನಿತ್ಯ ದಾಸೋಹ ವ್ಯವಸ್ಥೆ: ದೇವರ ಸನ್ನಿಧಿಗೆ ಬರುವ ಭಕ್ತರಿಗೆ ಪ್ರತಿ ದಿನ ಬೆಳಗಿನಿಂದ ರಾತ್ರಿವರೆಗೆ ಶ್ರೀವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರಿಂದ ನಿರಂತರ ಅನ್ನದಾಸೋಹ ನಡೆಯುತ್ತದೆ. ಭಕ್ತರು ದಾಸೋಹಕ್ಕಾಗಿ ನೀಡುವ ದವಸ, ಧಾನ್ಯ, ಕಾಳುಗಳು, ಬೇಳೆ, ತರಕಾರಿಗಳನ್ನು ಶ್ರೀವೈದ್ಯನಾಥೇಶ್ವರಸ್ವಾಮಿ ದೇವರ ಹೆಸರಿನಲ್ಲಿ ಸ್ವೀಕರಿಸಲಾಗುವುದು. ಭಕ್ತರು ತಾವು ಇಷ್ಟಪಟ್ಟ ದಿನದಂದು ಅಥವಾ ಇಷ್ಟದ ಜನರ ಪರವಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಹೆಸರಲ್ಲಿ ಅನ್ನ ದಾಸೋಹ ಕೂಡ ಏರ್ಪಾಡು ಮಾಡಬಹುದು.

ಶಿವರಾತ್ರಿಯಲ್ಲಿ ಜಾತ್ರಾಮಹೋತ್ಸವ: ಶಿವರಾತ್ರಿ ಹಬ್ಬದಂದು ವರ್ಷಕ್ಕೊಮ್ಮೆ 8 ದಿವಸಗಳ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ. ಜಾತ್ರೆಯ ಕೊನೆಯ ದಿವಸ ವೈಭವಯುಕ್ತ ತೆಪ್ಪೋತ್ಸವ ಇರುತ್ತದೆ. ಜಾತ್ರೆ ದಿನದಂದು ಆಕರ್ಷಕ ಬಾಣ-ಬಿರುಸುಗಳ ಪ್ರದರ್ಶನ ಇರುತ್ತದೆ. ಪ್ರತಿವರ್ಷ ಶಿವರಾತ್ರಿ ಹಬ್ಬದ ದಿವಸ ಸುತ್ತಮುತ್ತಲ ಗ್ರಾಮದ ಜನರ ಸಹಕಾರದಿಂದ ವಿಜೃಂಭಣೆಯಿಂದ ಸ್ವಾಮಿಗೆ ಪೂಜೆ, ಹೋಮ-ಹವನ, ರಥೋತ್ಸವ ನಡೆಯುತ್ತದೆ. ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೆ ಈ 8 ದಿವಸಗಳ ಕಾಲವು ದಾಸೋಹದ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿ ವ್ಯವಸ್ಥೆ ಮಾಡಿದೆ. ಇನ್ನೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆಗಳಿರುತ್ತವೆ.

ವಿಶೇಷ ಕಾರ್ಯಕ್ರಮಗಳು: ವೈದ್ಯನಾಥೇಶ್ವರ ಸನ್ನಿಧಿಯಲ್ಲಿ ವಿವಾಹ ಮಹೋತ್ಸವ ನಡೆಸಲು ಅವಕಾಶ ಇದೆ. ಜತೆಗೆ ಲಿಂಗದೀಕ್ಷೆ, ನಾಮಕರಣ ಮಂಗಳ ಕಾರ್ಯಗಳನ್ನು ಅಪೇಕ್ಷೆ ಪಡುವ ಯಾವುದೇ ಭಕ್ತರು ಮಾಡಬಹುದಾಗಿದೆ. ಶ್ರೀವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯವರು ನಿಗದಿ ಪಡಿಸಿದ ಸಂಖ್ಯೆಯಷ್ಟೇ ಜನರು ಬರಬೇಕು.

53 ಅಡಿ ಎತ್ತರದ ರಾಜಗೋಪುರ: ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೂತನವಾಗಿ 53 ಅಡಿ ಎತ್ತರದ ರಾಜಗೋಪುರ ನಿರ್ಮಿಸಲಾಗಿದೆ. ಭಕ್ತರೇ ನೀಡಿರುವ ದೇಣಿಗೆಯಿಂದ 1.5 ಕೋಟಿ ರೂ., ವೆಚ್ಚದಲ್ಲಿ ರಾಜಗೋಪುರ ನಿರ್ಮಿಸಲಾಗಿದ್ದು ಫೆ.20 ಹಾಗೂ 21 ರಂದು ರಾಜಗೋಪುರ ಉದ್ಘಾಟನಾ ಸಮಾರಂಭ ನಡೆಯಲಿದೆ.

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸ ಇದೆ. ನಾಡಿನೆಲ್ಲ್ಲೆಡೆ ಪ್ರಸಿದ್ಧಿ ಹೊಂದಿರುವ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸೇವಾ ಸಮಿತಿ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ನಿತ್ಯ ದಾಸೋಹ ವ್ಯವಸ್ಥೆ ಇದೆ. ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಸಾರ್ವಜನಿಕರಿಗೆ ವಸತಿಗೃಹ ನಿರ್ಮಿಸಲಾಗಿದೆ. ಬಿ.ದಯಾನಂದ್ ಗ್ರಾಪಂ ಮಾಜಿ ಅಧ್ಯಕ್ಷ, ಅರೆಯೂರು

ನೀವೂ ಮಾಹಿತಿ ನೀಡಿ:ಧಾರ್ಮಿಕ-ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ‘ದೇಗುಲಗಳ ದರ್ಶನ’ ವಿಜಯವಾಣಿ ಪ್ರತಿವಾರ ನಿಮಗೆ ನೀಡುತ್ತಿದೆ. ಈ ಬಗ್ಗೆ ನೀವೂ ನಮಗೆ ಮಹಿತಿ ನೀಡಬಹುದು. ಸಂಪರ್ಕಿಸಿ: 8884431912, ಇಮೇಲ್: jagannathkalenahalli@gmail.com