ವಿಜಯಪುರದ ಗುರುಪಾದೇಶ್ವರ ಬಡಾವಣೆಯ ತೋಂಟದಾರ್ಯ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಕಲ್ಯಾಣದ ಶರಣರ ದರ್ಶನ ಪ್ರವಚನದ ಮಹಾಮಂಗಲ ಕಾರ್ಯಕ್ರಮ ನಡೆಯಿತು. ಜಗದ್ಗುರು ಡಾ. ಸಿದ್ಧರಾಮ ಶ್ರೀ, ಹಿರಿಯ ಸಾಹಿತಿ ಫ.ಗು. ಸಿದ್ದಾಪುರ ಮತ್ತಿತರರಿದ್ದಾರೆ. 
ಜಿಲ್ಲೆ

ವಚನಗಳು ಜಗದ ದಾರಿದೀಪ : ತೋಂಟದ ಸಿದ್ಧರಾಮೇಶ್ವರ ಶ್ರೀ ಅಭಿಮತ

ವಿಜಯಪುರ : ಮನುಷ್ಯರನ್ನು ಮನುಷ್ಯರಂತೆ ಕಂಡ ವಿಶ್ವದ ಮೊದಲ ದಾರ್ಶನಿಕ ಬಸವಣ್ಣ ಎಂದು ಗದುಗಿನ ತೋಂಟದ ಜಗದ್ಗುರು ಡಾ. ಸಿದ್ಧರಾಮ ಶ್ರೀ ಹೇಳಿದರು. ಶನಿವಾರ ಇಲ್ಲಿನ ಗುರುಪಾದೇಶ್ವರ ಬಡಾವಣೆಯ ತೋಂಟದಾರ್ಯ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಕಲ್ಯಾಣದ ಶರಣರ ದರ್ಶನ ಪ್ರವಚನದ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಬಸವಣ್ಣನವರು ಕಟ್ಟಿದ ಅನುಭವ ಮಂಟಪದಲ್ಲಿ ತಮ್ಮ ರಾಜಸ್ವವನ್ನು ತ್ಯಾಗ ಮಾಡಿ ಬಂದ ವಿಶ್ವದ ರಾಜ್ಯ ಮಹಾರಾಜರಿಂದ ಹಿಡಿದು, ಕಸ ಗುಡಿಸುವ ಕಾಯಕ ಮಾಡುವ ಸತ್ಯಕ್ಕನಂತವರು ಕೂಡಾ ಶರಣರಾಗಿದ್ದರು. ಎಲ್ಲರನ್ನು ಜಾತಿ, ಲಿಂಗ, ವರ್ಣಗಳಿಂದ ಸಮಾನರಾಗಿ ಕಾಣುವುದೇ ನಮ್ಮ ಕಲ್ಯಾಣದ ಶರಣರ ವಚನ ಧರ್ಮ ಸಿದ್ಧಾಂತವಾಗಿದೆ.

ಇಂದು ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವಾದಿ ಪ್ರಮಥರು ವಚನಗಳಲ್ಲಿ ಉತ್ತರವಿದ್ದರೆ ಅಂದು ಕಲ್ಯಾಣದ ಬಸವಾದಿ ಶರಣರು ತೋರಿದ ಕಾರ್ಯಕ ದಾಸೋಹ ಪ್ರಸಾದ ಮಾರ್ಗ ಇಂದು ಜಗತ್ತಿಗೆ ದಾರಿದೀಪವಾಗಿದೆ ಎಂದು ತಿಳಿಸಿದರು.

ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪರ್ಯಂತ ಕಲ್ಯಾಣದ ಶರಣರ ದರ್ಶನ ಪ್ರವಚನಗೈದ ಮಹಾಂತ ಸ್ವಾಮೀಜಿ ಮುದಗಲ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಸಾರಿದ ತತ್ವ ಸಿದ್ಧಾಂತಗಳನ್ನು ಮತ್ತೆ 15ನೇ ಶತಮಾನದಲ್ಲಿ ಜಗತ್ತಿನಾದ್ಯಂತ 770 ವಿರಾಗಿಗಳಿಂದ ಪ್ರಸಾರ ಮಾಡಿದವರು ಯಡಿಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು. ಅದೇ ಪರಂಪರೆಯನ್ನು ಹಿಂದೆ ಜಗದ್ಗುರು ಸಿದ್ಧಲಿಂಗರು ಇಂದು ಗದುಗಿನ ತೋಂಟದಾರ್ಯ ಶ್ರೀಗಳು ಮುಂದುವರಿಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ ಎಂದರು.

ಹಿರಿಯ ಸಾಹಿತಿ ಫ.ಗು. ಸಿದ್ದಾಪುರ ಮಾತನಾಡಿ, ಅಲ್ಲಮಪ್ರಭುದೇವರ ಶೂನ್ಯ ಪೀಠಾಧ್ಯಕ್ಷತೆಯಲ್ಲಿ ಅಂದು ಬಸವಾದಿ ಶರಣರು, ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದರು. ಅವರು ಅಂದು ತೋರಿದ ಸಮಾನತೆಯ ದಿವ್ಯ ಸಂದೇಶವು ಇಂದು ನಮ್ಮಗೆಲ್ಲರಿಗೂ ಮಾದರಿಯಾಗಿದೆ ಎಂದರು. ಜಗದ್ಗುರು ಪಂಚಮಶಿವಲಿಂಗೇಶ್ವರ ನಿಡಸೋಸಿ ಮಹಾಸ್ವಾಮಿಗಳು ಹಾಗೂ ಶಂಭುಲಿಂಗ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ತೋಂಟದಾರ್ಯ ಅನುಭವ ಮಂಟಪದ ಕಾರ್ಯಾಧ್ಯಕ್ಷ ಎಸ್.ಎಚ್. ನಾಡಗೌಡ, ಉಪಾಧ್ಯಕ್ಷ ಎಂ.ಎಸ್. ರುದ್ರಗೌಡರ, ಖಜಾಂಚಿ ಗಂಗಾಧರ ಜೋಗೂರ, ಕಾರ್ಯದರ್ಶಿ ಎನ್.ಕೆ. ಕುಂಬಾರ, ಸದಸ್ಯ ಎಸ್.ಜಿ. ಗಡಗಿ, ಎಸ್.ಕೆ. ಇಂಗಳೇಶ್ವರ, ಸಿ.ಎಸ್. ಪಾಟೀಲ, ಸಂಜುಗೌಡ ಪಾಟೀಲ (ಕನಮಡಿ), ಎಸ್.ಆರ್. ಸೂಳಿಭಾವಿ, ಉಮೇಶ ಕಾರಜೋಳ, ಸಾಹಿತಿ ಶಂಕರ ಬೈಚಬಾಳ, ಅನೀಲ ಇಕ್ಕಡೆ, ಗುರುರಾಜ ಬಾಗೇವಾಡಿ, ರಾಹುಲ ಮೆಳ್ಳಿ, ಅಲ್ಲಮಪ್ರಭು ಸಾಲಿಮಠ ಮತ್ತಿತರರಿದ್ದರು.

ಪತ್ರಕರ್ತ ಜಿ.ಎಸ್. ಕಮತರ, ಬಸವರಾಜ ಸಂಪಳ್ಳಿ, ಮೋಹನ ಕಟ್ಟಿಮನಿ ಹಾಗೂ ಅನ್ನಪ್ರಸಾದ ದಾನಿಗಳಿಗೆ ಸನ್ಮಾನಿಸಲಾಯಿತು. ಲಾಯಪ್ಪ ಇಂಗಳೆ ಸಂಪಾದಕತ್ವದಲ್ಲಿ ಮುದ್ರಣಗೊಂಡ ಅನುಭವ ಮಂಟಪ ಬಸವ ಧರ್ಮ ಮಾಸಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು.