ಜಿಲ್ಲೆ

ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತ : ಎಂ. ಚಂದ್ರಶೇಖರ್

ಮೈಸೂರು: ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು, ಇಂದಿಗೂ ವಚನಗಳು ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ ಎಂದು ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಬಿ. ಸಂತೋಷ್ ರಚನೆಯ ವಚನ ವೈವಿಧ್ಯ ಕೃತಿ, ಬಿ. ಶೋಭಾ ರಚನೆಯ ಮನದ ಹಾಯ್ಕುಗಳು ಕವನ ಸಂಕಲನ ಬಿಡುಗಡೆ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರು ಅಳವಡಿಸಿಕೊಳ್ಳುವಂತಹ ವಚನಗಳನ್ನು ವಚನಕಾರರು ರಚಿಸಿದ್ದಾರೆ. ಮೌಲ್ಯಯುತ ಬದುಕನ್ನು ರೂಪಿಸಿಕೊಳ್ಳಲು ವಚನಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಮಹಿಪಾಲರೆಡ್ಡಿ ಮನ್ನೂರ್, ಡಾ.ಮಲ್ಲಿನಾಥ ಎಸ್. ತಳವಾರ, ಡಾ.ಸೋಮಶೇಖರ್, ಉಳುವಂಗಡ ಕಾವೇರಿ ಉದಯ, ಕೆ.ಎನ್. ಭೂಷಣ್, ಕೆ.ಎನ್. ಹಿತೈಶ್ ಭೂಷಣ್, ರೋನಿತ್ ಟಿ. ಗಿರೀಶ್, ಎಚ್.ಎನ್. ನಾಗಸಿರಿ, ವಿ.ಭುವಂತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್, ಶಿಕ್ಷಕಿ ಬಿ.ಶೋಭಾ, ಪ್ರತಿಷ್ಠಾನದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಸಿ.ವಾಣಿ ರಾಘವೇಂದ್ರ ಇದ್ದರು.