ಜಿಲ್ಲೆ

ವಚನಾನಂದ ಸ್ವಾಮೀಜಿ ಹೇಳಿಕೆ ವಿವಾದ | ಸಿಎಂ ರಾಜೀನಾಮೆ ವಿಚಾರ ಬೆಳೆಸುವ ಅಗತ್ಯವಿಲ್ಲ ಎಂದ ಸಚಿವ ಬೊಮ್ಮಾಯಿ

ಹುಬ್ಬಳ್ಳಿ: ಹರಿಹರದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ರಾಜೀನಾಮೆ ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿ ಈಗಾಗಲೇ ಸ್ವತಃ ಮುಖ್ಯಮಂತ್ರಿ, ಮುರುಗೇಶ್ ನಿರಾಣಿ ಮತ್ತು ವಚನಾನಂದ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ವಚನಾನಂದ ಸ್ವಾಮೀಜಿ ನೀಡಿದ ಹೇಳಿಕೆ ಮತ್ತು ಅದಕ್ಕೆ ಪ್ರತಿಯಾಗಿ ಸಿಎಂ ರಾಜೀನಾಮೆ ಬೆದರಿಕೆಗೆ ಸಂಬಂಧಿಸಿದಂತೆ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಈ ವಿಚಾರ ಬೆಳೆಸುವ ಅಗತ್ಯವಿಲ್ಲ. ಇನ್ನು ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಟ್ಟದ್ದು ಎಂದು ಹೇಳಿದರು.

ಹುಬ್ಬಳ್ಳಿಗೆ ಅಮಿತ್ ಷಾ: ಕೇಂದ್ರ ಗೃಹ ಸಚಿವ ಅಮಿತ್ ಷಾ 18ರಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಕಾರಣ ಇಲ್ಲಿನ ನೆಹರೂ ಮೈದಾನದ ಸುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತಿದೆ. ಸುರಕ್ಷತೆಯ ದೃಷ್ಠಿಯಿಂದ ಎಲ್ಲ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಅಮಿತ್ ಷಾ ಆಗಮನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಗೋ ಬ್ಯಾಕ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ನಾವು ಕಾಂಗ್ರೆಸ್ ನವರಿಗೆ ಯಾವುದಕ್ಕೂ ಅಡಚಣೆ ಮಾಡಿಲ್ಲ. ಆದರೆ, ಇದು ರಾಜಕೀಯ ಪ್ರೇರಿತ ಪ್ರತಿಭಟನೆ. ಹೀಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ನಮಗೇನು ತೊಂದರೆ ಇಲ್ಲ, ಕಾರ್ಯಕ್ರಮ ಬೃಹತ್ ಪ್ರಮಾಣದಲ್ಲಿ ನಡೆಯಲಿದೆ. ಅಹಿತಕರ ಘಟನೆ ನಡೆಯುವಂತೆ ಕಾಂಗ್ರೆಸ್ ಪ್ರತಿಭಟನೆ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಬೊಮ್ಮಾಯಿ ಎಚ್ಚರಿಸಿದರು.

ಉಗ್ರರ ಬಂಧನ: ರಾಜ್ಯದಲ್ಲಿ ಉಗ್ರರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿನಲ್ಲಿ ಒಂದು ತಂಡ ಉಗ್ರಗಾಮಿ ಚಟುವಟಿಕೆಯಲ್ಲಿ ಭಾಗಿಯಾಗಿತ್ತು. ಈ ಕುರಿತಂತೆ ಮಾಹಿತಿ ಸಿಕ್ಕ ನಂತರ ರಾಜ್ಯದ ಪೊಲೀಸರು ರಾಜ್ಯದಲ್ಲಿ ಬಂಧಿಸಿದ್ದಾರೆ. ಇನ್ನಿಬ್ಬರು ಬೇರೆ ರಾಜ್ಯದಿಂದ ಕೇರಳದ ಕನ್ಯಾಕುಮಾರಿಗೆ ಹೋಗಿ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ರು. ಉಗ್ರರ ಜಾಲವನ್ನ ಸಂಪೂರ್ಣ ಭೇದಿಸುವಲ್ಲಿ ರಾಜ್ಯದ ಪೊಲೀಸರು ಶ್ರಮಿಸಲಿದ್ದಾರೆ ಎಂದು ಹೇಳಿದರು.