ಹುನಗುಂದ: ಸರಳ ಭಾಷೆಯ ಮೂಲಕ ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾದ ವಚನ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತವೆನ್ನಿಸುತ್ತದೆ ಎಂದು ಹಿರಿಯ ಲೇಖಕ ಸಿದ್ದಲಿಂಗಪ್ಪ ಬೀಳಗಿ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಬುಧವಾರ ಲಿಂ. ಮುರುಘೇಂದ್ರ ಮಹಾಸ್ವಾಮಿಗಳ 59ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಎರಡು ಸಾವಿರ ವರ್ಷಗಳ ಸುದೀರ್ಘ ಪರಂಪರೆಯಿರುವ ಕನ್ನಡ ಸಾಹಿತ್ಯಕ್ಕೆ ಶರಣರು, ಸಂತರು, ದಾಸರು, ಸೂಫಿಗಳು, ತತ್ವಪದಕಾರರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಕಾಯಕದೊಂದಿಗೆ ಗುರುತಿಸಿಕೊಂಡ ವಚನಕಾರರು ಬದುಕಿಗೆ ಹತ್ತಿರವಾದ ವಿಷಯಗಳ ಕುರಿತು ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿದ್ದಾರೆ. ಅವುಗಳ ಅರ್ಥ ಸದ್ಯದ ಬದುಕಿಗೂ ಅನ್ವಯಿಸುವಂತಿವೆ ಎಂದರು.
ಡಾ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ದೇಹ ಮತ್ತು ಮನಸ್ಸು ಶುದ್ಧಿಯಾಗುತ್ತದೆ ಎಂದು ತಿಳಿಸಿದರು.
ಮಹಾಂತಯ್ಯ ಗಚ್ಚಿನಮಠ, ಐ.ಬಿ. ಹಿರೇಮಠ ಮಾತನಾಡಿದರು.
ಬಳಿಕ ಗಣ್ಯರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಅಮರೇಶ್ವರ ದೇವರು ಗಚ್ಚಿನಮಠ ನೇತೃತ್ವ ವಹಿಸಿದ್ದರು. ಅರುಣ ದುದ್ಗಿ ಸ್ವಾಗತಿಸಿದರು. ಪ್ರಭು ಮಾಲಗಿತ್ತಿಮಠ ನಿರೂಪಿಸಿದರು.