ಜಿಲ್ಲೆ

ಸಕಲ ಜೀವಾತ್ಮರಿಗೆ ಲೇಸು ಬಯಸುವ ವಚನ ಸಾಹಿತ್ಯ : ವಚನ ಕುಮಾರಸ್ವಾಮಿ ಬಣ್ಣನೆ

ಸದೇಶ್ ಕಾರ್ಮಾಡ್

ಮೈಸೂರು: ಸಕಲ ಜೀವಾತ್ಮರಿಗೆ ಲೇಸನ್ನು ಬಯಸಲು ರಚಿತವಾದುದೇ ವಚನ ಸಾಹಿತ್ಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ತಾಲೂಕಿನ ಮರಯ್ಯನಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಚ್.ಎಂ ಚಂದ್ರಶೇಖರಶಾಸ್ತ್ರಿ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ 71ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಕೃತಿಯಲ್ಲಿರುವ ಪ್ರತಿಯೊಂದು ಪ್ರಾಣಿಯನ್ನು ಪ್ರೀತಿಸಬೇಕು ಎಂದು ತಿಳಿಸಿದ ಶರಣರು ದಯೆ ಇರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ಯೂ ಎಂದು ಹೇಳಿ ಅದರಂತೆ ಬದುಕಬೇಕು ಎಂದು ತಿಳಿಸಿಕೊಟ್ಟರು. ಭಗವಂತನು ನಿರಾಕಾರ, ಅವನು ಕಣ್ಣಿಗೆ ಕಾಣದ ನಾಟಕಕಾರನಾ ಗಿರುವನು. ಈ ಭೂಮಿಯ ಮೇಲೆ ಪಾತ್ರದಾರಿಗಳಾಗಿರುವ ನಾವು ನಿಷ್ಠೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ನಮ್ಮ ದೇಹದಲ್ಲಿರುವ ಪ್ರತಿಯೊಂದು ಭಾಗವನ್ನು ಸತ್ಕಾರ್ಯಕ್ಕೆ ಬಳಸಿದಾಗ ಶರಣರು ಹೇಳಿದಂತೆ ನಮ್ಮ ದೇಹವೇ ದೇವಾಲಯವಾಗುತ್ತದೆ ಎಂದರು.

ಕೇಂದ್ರ ಸರ್ಕಾರದ ಮೆಕಾನ್‌ನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎಂ. ವಿಶ್ವನಾಥಶಾಸ್ತ್ರಿ ಮಾತನಾಡಿ, ಗ್ರಾಮವೊಂದರಲ್ಲಿ ವಚನ ಸಾಹಿತ್ಯ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯ. ವಚನಗಳು ಮೌಲ್ಯಯುತವಾದ ಜ್ಞಾನವನ್ನು ಕಟ್ಟಿಕೊಡುತ್ತವೆ. ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಕರು ಮತ್ತು ತಂದೆ ತಾಯಿಗಳ ಉತ್ತಮ ಮಾರ್ಗದರ್ಶನದಲ್ಲಿ ಬೆಳೆದಾಗ ಇಂದಿನ ಮಕ್ಕಳು ಮುಂದೆ ದೇಶದ ಆಸ್ತಿಯಾಗುತ್ತಾರೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ತರಗತಿಯ ಪಠ್ಯದಲ್ಲಿ ಅನೇಕ ವಚನಕಾರರ ವಚನಗಳನ್ನು ನೀಡಿರುವುದರ ಉದ್ದೇಶವೇನೆಂದರೆ ಮಕ್ಕಳು ನಡೆ ನುಡಿ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಲ್ಯದಲ್ಲಿಯೇ ಸಂಸ್ಕಾರ ರೂಡಿಸಿಕೊಳ್ಳುವುದೇ ಆಗಿದೆ ಎಂದರು.

ನಂತರ ಸಾಮೂಹಿಕ ವಚನ ವಾಚನ ಮಾಡಿದ 20 ವಿದ್ಯಾರ್ಥಿಗಳಿಗೆ, ವಚನದೀವಿಗೆ ಪ್ರಮಾಣಪತ್ರ, ವಚನ ಪುಸ್ತಕ ಹಾಗೂ ಶಾಲಾ ಬ್ಯಾಗ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಉಪಾಧ್ಯಕ್ಷರಾದ ಶಿವಪುರ ಉಮಾಪತಿ, ಪುಷ್ಪಾ ಉಮಾಪತಿ, ಮುಖ್ಯಶಿಕ್ಷಕಿ ಜಿ. ಹೇಮಲತಾ, ಸಹಶಿಕ್ಷಕಿ ವಿ. ಗೀತಾ, ಅಡುಗೆ ಸಹಾಯಕಿ ರಾಜೇಶ್ವರಿ ಇದ್ದರು.