ಜಿಲ್ಲೆ

ವೀಣೆ ಶೇಷಣ್ಣ ಭವನದಲ್ಲಿಂದು ವಚನ ಸಂಗೀತೋತ್ಸವ

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ವತಿಯಿಂದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಸ್ಮರಣಾರ್ಥ ‘ವಚನ ಸಂಗೀತೋತ್ಸವ’ ಕಾರ್ಯಕ್ರಮವನ್ನು ಮಾ. 17ರ ಸಂಜೆ 5ಕ್ಕೆ ಕುವೆಂಪು ನಗರದ ವೀಣೆ ಶೇಷಣ್ಣ ಭವನದಲ್ಲಿ ಆಯೋಜಿಸಲಾಗಿದೆ.

ಗಾನಭಾರತಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಖ್ಯಾತ ಸುಗಮ ಸಂಗೀತ ಕಲಾವಿದ ಪ್ರೊ.ಎಸ್.ಮಲ್ಲಣ್ಣ ಮತ್ತು ಸಪ್ತಸ್ವರ ಬಳಗದ ಗಾಯಕಿ ವಿದುಷಿ ಗೀತಾ ಹೆಬ್ಬಾರ್ ‘ವಚನ ಸಂಗೀತ’ ಕಾರ್ಯಕ್ರಮ ನೀಡಲಿದ್ದಾರೆ.

ಪ್ರೊ.ಎಸ್. ಮಲ್ಲಣ್ಣ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, 4 ದಶಕಗಳಿಂದ ಪ್ರಸಿದ್ಧ ಸಂಘ, ಸಂಸ್ಥೆಯ ಉತ್ಸವಗಳಲ್ಲಿ ಗಾಯನ ಕಾರ್ಯಕ್ರಮ ನೀಡುತ್ತಿದ್ದಾರೆ. ರಾಗ ಸಂಯೋಜಿಸಿ ಹಲವು ಸಿ.ಡಿ.ಗಳನ್ನು ಹೊರತಂದಿದ್ದಾರೆ. ‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ’, ‘ಸಿದ್ಧಗಂಗ ಪ್ರಶಸ್ತಿ’, ‘ರೋಟರಿ ಪ್ರಶಸ್ತಿ’, ‘ಹೊಯ್ಸಳ ಪ್ರಶಸ್ತಿ’ ಇವರಿಗೆ ಸಂದಿವೆ. ಪಕ್ಕವಾದ್ಯದಲ್ಲಿ ಎ.ಎನ್.ಪ್ರಸನ್ನ (ಆರ್ಗನ್), ಕಿರಣ್‌ಕುಮಾರ್(ತಬಲ) ಹಾಗೂ ವಿನ್ಸೆಂಟ್(ದಿದಂ ಪ್ಯಾಡ್) ಸಹಕಾರ ನೀಡಲಿದ್ದಾರೆ.

ಗೀತಾ ಹೆಬ್ಬಾರ್ ಸಂಗೀತ ಮನೆತದ ಹಿನ್ನೆಲೆ ಹೊಂದಿರುವ ಗ್ರಾಮೀಣ ಪ್ರತಿಭೆ. ಗಂಗೂಬಾಯಿ ಹಾನಗಲ್ ಸಂಗೀತ ವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪ್ರಥಮ ಬ್ಯಾಂಕ್‌ನಲ್ಲಿ ಗಳಿಸಿದ್ದಾರೆ. ರಾಜ್ಯದ ಹಲವೆಡೆ ಕಾರ್ಯಕ್ರಮ ನೀಡಿ ಜನಮೆಚ್ಚುಗೆ ಗಳಿಸಿದ್ದಾರೆ. ಸಪ್ತಸ್ವರ ಬಳಗದಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಪಕ್ಕವಾದ್ಯದಲ್ಲಿ ಪಂ. ಭೀಮಾಶಂಕರ ಬಿದನೂರ (ಹಾರ್ಮೋನಿಯಂ), ಮೃತ್ಯುಂಜಯ ಹಿರೇಮಠ (ತಬಲ) ಸಾಥ್ ನೀಡಲಿದ್ದಾರೆ.