ಹುಬ್ಬಳ್ಳಿ: ಅತ್ಯಾಧುನಿಕ ಉಪಕರಣಗಳು, ಸೌಲಭ್ಯಗಳನ್ನು ಹೊಂದಿರುವ ವಚನ ಡೈಗ್ನೋಸ್ಟಿಕ್ ಸೆಂಟರ್ ಇಲ್ಲಿಯ ಹೊಸೂರ ಮಹಿಳಾ ವಿದ್ಯಾಪಿಠ ಆವರಣದಲ್ಲಿ ಭಾನುವಾರ ಆರಂಭಿಸಲಾಯಿತು.
ವಿವಿಧ ತಜ್ಞ ವೈದ್ಯರನ್ನು ಒಳಗೊಂಡ ಈ ಕೇಂದ್ರದಲ್ಲಿ 1.5ಟಿ ಎಂಆರ್ಐ, ಸಿಟಿ ಸ್ಕಾನ್, ಅಲ್ಟ್ರಾಸೋನೊಗ್ರಾಫಿ, ಡಿಜಿಟಲ್ ಎಕ್ಸರೇ ವಿತ್ ಅಡ್ವಾನ್ಸಡ್ ಡಿಆರ್ ಸಿಸ್ಟ್ಂ, ಅಪ್ಪರ್ ಜಿಐ ಎಂಡೋಸ್ಕೋಪಿ ಹಾಗೂ ಕೊಲೊನೊಸ್ಕೋಪಿ, ಟಿಎಂಟಿ, ಟುಡಿ ಇಕೋಕಾಡಿರ್ಯಾಗ್ರಾಫಿ, ಕ್ಲಿನಿಕಲ್ ಲ್ಯಾಬೊರೋಟರಿ ಸೇರಿ ಹಲವು ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದೆ.
ಭಾನುವಾರ ಬೆಳಗ್ಗೆ ಪೂಜಾ ಸಮಾರಂಭ ನಡೆಯಿತು. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಯವರು ಡೈಗ್ನೋಸ್ಟಿಕ್ ಕೇಂದ್ರ ಉದ್ಘಾಟಿಸಿದರು.
ಯಾವುದೇ ರೋಗಕ್ಕೆ ಚಿಕಿತ್ಸೆ ನೀಡುವ ಮುಂಚೆ ಸರಿಯಾಗಿ ಕಾಯಿಲೆ ಪತ್ತೆ ಹಚ್ಚುವುದು ಮುಖ್ಯವಾಗಿದೆ. ಇದಕ್ಕಾಗಿ ಇಂತಹ ಕೇಂದ್ರಗಳು ನೆರವಾಗುತ್ತವೆ. ಕಾಯಿಲೆಗೆ ಈಗ ಅಂದಾಜಿನ ಮೇಲೆ ಔಷಧ ಕೊಡುವುದಿಲ್ಲ. ಖಚಿತ ಉಪಚಾರ ಅಗತ್ಯ, ಇದರಿಂದ ರೋಗಿಗೆ ಶ್ರೀ ಚಿಕಿತ್ಸೆ ಆರಂಭಿಸಲು ಇದು ಅನುಕೂಲಕರ ಎಂದು ಸ್ವಾಮೀಜಿ ಹೇಳಿದರು.
ಕೇಂದ್ರದ ನಿರ್ದೇಶಕ ಅಭಿಷೇಕ ಪಾಟೀಲ ಮಾತನಾಡಿ, ಅವಳಿನಗರದ ಜನತೆಗೆ ಒಳ್ಳೆಯ ಸೇವೆ ಸಿಗಬೇಕು. ತ್ವರಿತ ಚಿಕಿತ್ಸೆ ನೀಡಬೇಕು ಎನ್ನುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ ಎಂದರು.
ಇನ್ನೊಬ್ಬ ನಿರ್ದೇಶಕ ಭರತ ಜೈನ್ ಮಾತನಾಡಿ, ಇಲ್ಲಿಗೆ ಬಂದ ರೋಗಿಗಳು ಉಪಚಾರ ಪಡೆದು ನಗುತ್ತ ಹೊರಗೆ ಹೋಗಬೇಕು ಎಂಬ ಆಶಯ ನಮ್ಮದು ಎಂದರು. ಡಾ. ಸಂತೋಷ ಕುಲಗೋಡ, ಜಗದೀಶ ತುಬಚಿ, ಬಸಂತಕುಮಾರ ಪಾಟೀಲ, ಇತರರಿದ್ದರು.