ವಿಜಯವಾಣಿ ಸುದ್ದಿಜಾಲ ಧಾರವಾಡ
ಲಿಂಗಾಯತರನ್ನು ದಾರಿ ತಪ್ಪಿಸಲು ಆರ್ಎಸ್ಎಸ್ನವರು ಸ್ವತಃ ವಚನ ದರ್ಶನ ಕೃತಿ ಪ್ರಕಟಿಸಿದ್ದಾರೆ. ಅದರಲ್ಲಿನ ಸಂಪೂರ್ಣ ವಿಷಯ ಸತ್ಯಕ್ಕೆ ದೂರವಾಗಿದೆ. ಹೀಗಾಗಿ ಸಮಾಜದ ಜನರು ಜಾಗೃತರಾಗಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಹೇಳಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸೇರಿ ಬಸವಪರ ಸಂಘಟನೆಗಳ ವತಿಯಿಂದ ಇಲ್ಲಿನ ಲಿಂಗಾಯತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ "ವಚನ ದರ್ಶನ' ಮಿಥ್ಯ ವರ್ಸಸ್ ಸತ್ಯ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಲಿಂಗಾಯತ ಸಮಾಜದ ವಿರುದ್ಧದ ಕೃತಿ ಪ್ರಕಟಿಸಿ ಲಿಂಗಾಯತ ಮಠಾಧೀಶರಿಂದಲೇ ಬಿಡುಗಡೆಗೊಳಿಸಿದರೆ ಜನರು ಒಪ್ಪಲಿದ್ದಾರೆ ಎಂಬ ಭ್ರಮೆಯಲ್ಲಿದ್ದರು. ಸಮಾಜದ ಹಿರಿಯರು ಮಠಾಧೀಶರಿಗೆ ಮಾಹಿತಿ ನೀಡಿದಾಗ ಹಿನ್ನಡೆಯಾಗಿದೆ. ಯಡಿಯೂರಪ್ಪ ಗುಡಿ ಕಟ್ಟಿದರೆ ಅದಕ್ಕೆ ಕಳಸವಿಡುವ ಕೆಲಸವನ್ನು ವಿಜಯೇಂದ್ರ ಮಾಡಬೇಕು. ಆದರೆ, ಕಟ್ಟಿದ ಗುಡಿಯನ್ನೇ ನಿರ್ಣಾಮ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಬಸವಾದಿ ಶಿವಶರಣರ ಅಭಿಪ್ರಾಯಗಳಿಗೆ ವಿರುದ್ಧ ವಚನ ದರ್ಶನ ತರಲಾಗಿದೆ. ವೇದ, ಶಾಸ್ತ್ರ, ಆಗಮ, ತರ್ಕ ವಿಚಾರಗಳನ್ನು ಶರಣರು ಪ್ರತಿಪಾದಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅವುಗಳನ್ನು ಶರಣರು ವಿರೋಧಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.
ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಬಗ್ಗೆ ಇಲ್ಲಸಲ್ಲದ್ದನ್ನು ಬರೆದು ಪ್ರಕಟಗೊಳಿಸಿದ್ದ ವಚನ ದರ್ಶನಕ್ಕೆ ಈ ಕೃತಿ ಉತ್ತರ ನೀಡಿದೆ. ಬಸವ ಧರ್ಮದ ಬಗ್ಗೆ ಶ್ರದ್ಧೆ ಇರಬೇಕು. ಧರ್ಮಕ್ಕೆ ಅಪಚಾರವಾದಾಗ ಎಲ್ಲರೂ ಒಟ್ಟಾಗಿ ಧ್ವನಿ ಎತ್ತಬೇಕು. ಅಂದಾಗ ಮಾತ್ರ ನಾವು ಯಾವುದೇ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದರು.
ಸಿ.ಎಂ. ಕುಂದಗೋಳ, ಮಹಾಂತೇಶ ಪಾಟೀಲ, ಜಿ.ವಿ. ಕೊಂಗವಾಡ, ಎಂ.ವಿ. ಗೊಂಗಡಶೆಟ್ಟಿ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಎನ್.ಜಿ. ಮಹಾದೇವಪ್ಪ, ಪ್ರದಿಪಗೌಡ ಪಾಟೀಲ, ನೀಲಕಂಠ ಅಸೂಟಿ, ಡಾ. ಲಿಂಗರಾಜ ಅಂಗಡಿ, ಶಶಿಧರ ಕರವೀರಶೆಟ್ಟರ, ಸಿದ್ರಾಮಣ್ಣ ನಡಕಟ್ಟಿ, ಇತರರು ಇದ್ದರು.