ಜಿಲ್ಲೆ

ವಚನಗಳ ನಡಿಗೆ ಶಾಲಾ ಕಾಲೇಜುಗಳೆಡೆಗೆ ಕಾರ್ಯಕ್ರಮ

ಸುನಿಲ್ ಪೊನ್ನೇಟಿ

ಮಡಿಕೇರಿ:

ಆಧುನಿಕ ಜೀವನ ಪದ್ದತಿಯಿಂದಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ಹೊತ್ತಿನಲ್ಲಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಮೌಲ್ಯಗಳು ಮನುಷ್ಯನ ಉತ್ತಮ ಜೀವನಕ್ಕೆ ಕಿರೀಟಪ್ರಾಯ ಎಂದು ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಲ್. ಹರ್ಷವರ್ಧನ್ ಹೇಳಿದರು. ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಮಡಿಕೇರಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ " ವಚನಗಳ ನಡಿಗೆ ಶಾಲಾ ಕಾಲೇಜುಗಳೆಡೆಗೆ " ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿರು.

ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತಾಗಿರುವ ವಚನಗಳನ್ನು ವಿದ್ಯಾರ್ಥಿಗಳು ಶಾಲಾ ಕಾಲೇಜು ಹಂತದಲ್ಲಿಯೇ ಅರಿಯಬೇಕು. ವಚನಗಳ ಸಾರದಂತೆ ನಡವಳಿಕೆ ರೂಪಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅದು ಇಡೀ ಬದುಕಿಗೆ ವರವಾಗುತ್ತದೆ. ಹಾಗಾಗಿ ೯೦೦ ವರ್ಷಗಳು ಕಳೆದರೂ ಕೂಡ ಸರ್ವ ಶ್ರೇಷ್ಠ ಹಾಗೂ ಸರ್ವವ್ಯಾಪಿಯಾದ ವಚನ ಸಾಹಿತ್ಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದರು.

ವಚನ ಸಾಹಿತ್ಯದ ಮೌಲ್ಯಗಳ ಕುರಿತು ಪ್ರವಚನ ನೀಡಿದ ಕುಶಾಲನಗರ ತಾಲೂಕು ಬಸವನಹಳ್ಳಿ ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಶಿವಕುಮಾರ್, ಬಸವಣ್ಣನ ವಚನಗಳು ಸಾರ್ವಕಾಲಿಕವಾದ ಮೌಲ್ಯಗಳೊಂದಿಗೆ ಮನುಷ್ಯನನ್ನು ಪರಿಶುದ್ಧತೆಯತ್ತ ಕೊಂಡೊಯ್ಯುತ್ತವೆ. ವಚನಗಳ ಅರಿವು ಮನುಷ್ಯನ ಅಂತರಂಗವನ್ನು ಶುದ್ದಿ ಮಾಡುತ್ತವೆ. ಹಾಗಾಗಿ ವಿದ್ಯಾರ್ಥಿಗಳು ವಚನ ಸಾಹಿತ್ಯವದ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಮಾತಮಾಡಿದರು. ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಕೆ.ಬಿ. ಗೌರಿ, ರಾಜಸುಂದರಂ, ಚನ್ನಬಸಪ್ಪ ಇದ್ದರು. ವಿದ್ಯಾರ್ಥಿಗಳಾದ ಅಫೀಫಾ, ಪ್ರಿಯದರ್ಶಿನಿ, ತನಿಷಾ, ಹೇಮಾವತಿ ವಚನ ಗಾಯನ ನಡೆಸಿಕೊಟ್ಟರು.