ಹುಬ್ಬಳ್ಳಿ: ಮನುಷ್ಯನಿಗೆ ಜೀವನ ಕ್ರಮ, ಪದ್ಧತಿಯನ್ನು ಅತ್ಯಂತ ಸರಳ ಭಾಷೆಯಲ್ಲಿ ತಿಳಿಸಿಕೊಟ್ಟಿದ್ದು ವಚನ ಸಾಹಿತ್ಯ, ಮಾನವ ಅಷ್ಟೇ ಅಲ್ಲ ಸಕಲ ಪ್ರಾಣಿಗಳು ಬದುಕಬೇಕು ಎಂದು ಶರಣರು ನಮಗೆಲ್ಲ ಹೇಳಿಕೊಟ್ಟರು ಎಂದು ಆರ್ ಎಸ್ ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹರು ರಾಘವೇಂದ್ರ ಕಾಗವಾಡ ಹೇಳಿದರು.
ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಬುಧವಾರ ಅರಿವು, ಸಾಮರಸ್ಯ ವೇದಿಕೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಆಶಯ ಭಾಷಣ ಮಾಡಿದರು.
ವ್ಯಕ್ತಿ ವಿಕಾಸವು ಸರಿಯಾದ ದಿಕ್ಕಿನಲ್ಲಿ ಸಾಗಬೇಕು, ಸಹಬಾಳ್ವೆ, ಸಹಜೀವನ ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಚನಕಾರರು ಜೀವನದ ಅನುಭವದ ಆಧಾರದಲ್ಲಿ ಜೀವನ ಪದ್ಧತಿಯನ್ನು ಕಲಿಸಿಕೊಟ್ಟಿದ್ದಾರೆ. ಶರೀರ, ಬುದ್ಧಿ, ಮನಸ್ಸು ಹೀಗೆ ಎಲ್ಲದಕ್ಕೂ ಅವರು ಸಂಸ್ಕಾರ ಕೊಟ್ಟರು, ಕಾಯಕವೇ ಕೈಲಾಸ ತತ್ವವನ್ನು ಅತ್ಯಂತ ಸುಲಭವಾಗಿ ಅರ್ಥೈಸಿದವರು ಎಂದರು.
ಮನುಷ್ಯನ ಬದುಕಿಗೆ ಸಂಸ್ಕಾರ ಕೊಡುವ ಶಕ್ತಿ ಶರಣರ ವಚನಗಳಿಗೆ ಇದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ವಚನಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಧರ್ಮ, ಆಧ್ಯಾತ್ಮವನ್ನು ಜಗತ್ತಿಗೆ ಕೊಟ್ಟ ಸಮೃದ್ಧ ಭಾರತದಲ್ಲಿ ವಚನ ಸಾಹಿತ್ಯವು ತನ್ನದೇ ಆದ ಶೈಲಿಯಲ್ಲಿ ಸಮಾಜವನ್ನು ಮುನ್ನಡೆಸುವ ಶಕ್ತಿ ಹೊಂದಿದೆ. ಸಮಾಜದಲ್ಲಿ ಅಡಗಿರುವ ದ್ವಂದ್ವವನ್ನು ಸಹ ಹೋಗಲಾಡಿಸುತ್ತದೆ ಎಂದು ಹೇಳಿದರು.
ಅತಿಥಿಗಳಾಗಿದ್ದ ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ತಿಳಿಯುವ ರೀತಿಯಲ್ಲಿ ಮಹಾತ್ಮ ಬಸವೇಶ್ವರರು ಸೇರಿ ಎಲ್ಲ ವಚನಕಾರರು ಸುಲಭ ಸಾಹಿತ್ಯ ನೀಡಿದರು. ಅಂತಹ ದಾರ್ಶನಿಕರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.
ದೇವರನ್ನು ಮರೆತರೂ ಕಾಯಕ ಮರೆಯಬಾರದು ಎಂದು ತಿಳಿಸಿಕೊಟ್ಟವರು ವಚನಕಾರರು, ಹಾಗಾಗಿ ವಚನ ದರ್ಶನ ಪುಸ್ತಕವು ಜೀವನದಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ದೇವರಹುಬ್ಬಳ್ಳಿ ಸಿದ್ಧಾರೂಢ ಮಠದ ಶ್ರೀಸಿದ್ಧಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಾಸ್ತಾವಿಕ ಮಾತನಾಡಿದ ಜನಮೇಜಯ ಉಮರ್ಜಿ ಪುಸ್ತಕದ ಪರಿಚಯ ಮಾಡಿದರು.
ಕೇಶವ ವಿದ್ಯಾಕೇಂದ್ರದ ಮಕ್ಕಳು ಶರಣರ ವೇಷಭೂಷಣ ಧರಿಸಿ ಪಾಲ್ಗೊಳ್ಳುವ ಮೂಲಕ ವಚನ ದರ್ಶನ ಪುಸ್ತಕ ಲೋಕಾರ್ಪಣೆಯನ್ನು ವಿಶೇಷ ಆಕರ್ಷಣೆಗೊಳಿಸಿದರು.
ಅರಿವು ವೇದಿಕೆ ಸಂಯೋಜಕ ಶರದ್ ದೇಶಪಾಂಡೆ ಅತಿಥಿಗಳನ್ನು ಪರಿಚಯಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುಶೀಲೇಂದ್ರ ಕುಂದರಗಿ, ಸಾಮರಸ್ಯ ವೇದಿಕೆ ಮಹಾನಗರ ಸಂಯೋಜಕ ಈರಣ್ಣ ಶಿರಸಂಗಿ, ಪೂರ್ಣಾನಂದ ಮಳಲಿ, ಪ್ರೊ. ಸಿದ್ದಲಿಂಗಮ್ಮ ಹಿರೇಮಠ, ಇತರರು ಇದ್ದರು.