ಜಿಲ್ಲೆ

3.40 ಲಕ್ಷ ಜಾನುವಾರುಗಳಿಗೆ ಕಾಲು, ಬಾಯಿ ಲಸಿಕಾಕರಣ ಪ್ರಾರಂಭ

Uttara Kannada - Subash Hegde

ಕಾರವಾರ: ಜಾನುವಾರುಗಳಿಗೆ ಕಾಲು ಬಾಯಿ ಜ್ವರ ನಿರೋಧಕ 7ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಶನಿವಾರ ಚಾಲನೆ ದೊರೆತಿದ್ದು, ಜೂನ್ 9 ರವರೆಗೂ ನಡೆಯಲಿದೆ. ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದದಡಿ ಈ ಲಸಿಕಾ ಕಾರ್ಯಕ್ರಮ ಆರಂಭವಾಗಿದ್ದು, 4 ರಿಂದ 5 ತಿಂಗಳ ಮೇಲ್ಪಟ್ಟ 3,40,055 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ 230 ಸಿಬ್ಬಂದಿಗೆ ಪ್ರತಿ ದಿನ 50 ರಿಂದ 75 ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ನೀಡಲಾಗಿದೆ. ಅವರು ಮನೆ, ಮನೆಗೆ ತೆರಳಿ ಉಚಿತವಾಗಿ ಲಸಿಕೆಯನ್ನು ನೀಡಲಿದ್ದಾರೆ. ಈ ಲಸಿಕೆಯ ಜೊತೆಗೆ ಚರ್ಮಗಂಟು ರೋಗ ನಿಯಂತ್ರಣ ಲಸಿಕೆಯನ್ನೂ ನೀಡಲು ಸೂಚಿಸಲಾಗಿದೆ.

ವೈದ್ಯರ ಕೊರತೆ

ಉತ್ತರ ಕನ್ನಡ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಪಶು ವೈದ್ಯರ ಅವಶ್ಯಕತೆ ಇದೆ. ಆದರೆ, ಕೇವಲ 38 ಜನ ಮಾತ್ರ ಪಶು ವೈದ್ಯರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ನೇಮಕಾತಿಯಲ್ಲೂ ಉತ್ತರ ಕನ್ನಡ ಜಿಲ್ಲೆಯನ್ನು ಆಯ್ದುಕೊಂಡವರು ಕಡಿಮೆ. ಇದರಿಂದ ಎಲ್ಲ ಸಿಬ್ಬಂದಿಗೆ ಲಸಿಕಾಕರಣದ ತರಬೇತಿ ನೀಡಿ, ಅವರನ್ನೇ ಲಸಿಕೆ ಹಾಕಲು ಬಳಸಿಕೊಳ್ಳಲಾಗುತ್ತಿದೆ. ನಿರ್ದಿಷ್ಟ ಪ್ರದೇಶವನ್ನು ಗುರುತಿಸಿಕೊಂಡು ಅವರು ಮೊದಲೇ ಕರೆ ಮಾಡಿ ಲಸಿಕೆ ನೀಡುತ್ತಿದ್ದಾರೆ ಎನ್ನುತ್ತಾರೆ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು.

9200 ಪಶುಗಳಿಗೆ ಚಿಕಿತ್ಸೆ

ರಾಷ್ಟ್ರೀಯ  ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ 13 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆ ಲಭ್ಯವಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 9200 ಪಶುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಮೋಹನಕುಮಾರ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರು ಮತ್ತು ಜಾನುವಾರು ಮಾಲೀಕರು ಉಚಿತ ಟೋಲ್ ಫ್ರೀ ಸಂಖ್ಯೆ 1962 ಕ್ಕೆ ಬೆಳಗ್ಗೆ 9 ರಿಂದ ಸಾಯಂಕಾಲ 5 ಗಂಟೆಯವರೆಗೆ ಕರೆ ಮಾಡುವ ಮೂಲಕ ಉಚಿತವಾಗಿ ಈ ಐಷಧ ಹಾಗೂ ಚಿಕಿತ್ಸೆಯನ್ನು ಪಡೆಯಬಹುದು. ಈ ಸಂಖ್ಯೆಗೆ ಅಂಕೋಲಾ ತಾಲೂಕಿನಲ್ಲಿ 539, ಭಟ್ಕಳ-577, ಹಳಿಯಾಳ-904, ದಾಂಡೇಲಿ-430, ಹೊನ್ನಾವರ-488, ಕಾರವಾರ-394, ಕುಮಟಾ-482, ಮುಂಡಗೋಡು- 1298, ಸಿದ್ದಾಪುರ -677, ಶಿರಸಿ- 1136, ಜೋಯಿಡಾ- 524, ಯಲ್ಲಾಪುರ- 734, ಪಾಲಿ ಕ್ಲಿನಿಕ್ ಯಲ್ಲಾಪುರದಲ್ಲಿ -1026 ಕರೆಗಳು ಸ್ವೀಕೃತಗೊಂಡಿವೆ ಎಂದು ಅವರು ವಿವರಿಸಿದ್ದಾರೆ.

ಲ್ಲೆಯಲ್ಲಿ 4.10 ಲಕ್ಷ ಹಸು, ಎಮ್ಮೆ ಮುಂತಾದ ಜಾನುವಾರುಗಳಿದ್ದು, 19,000 ಕುರಿ ಮೇಕೆಗಳು, 75,000 ನಾಯಿಗಳಿದ್ದು ಈ ವಾಹನಗಳಲ್ಲಿ 9 ಪಶುವೈದ್ಯರು ಮತ್ತು 13 ಪಶು ವೈದ್ಯ ಸಹಾಯಕರು ಹಾಗೂ ವಾಹನ ಚಾಲಕರು ಇದ್ದಾರೆ. ಪಶು ವೈದ್ಯರ ತೀವ್ರ ಕೊರತೆ ಇರುವ ಗುಡ್ಡಗಾಡು ಪ್ರದೇಶವಾಗಿರುವ ಜಿಲ್ಲೆಗೆ ಈ ವ್ಯವಸ್ಥೆ ವರದಾನವಾಗಿದೆ ಎಂದು ತಿಳಿಸಿದ್ದಾರೆ.

ಪಶು ವೈದ್ಯಕೀಯ ಇಲಾಖೆ ಎಲ್ಲ ಸಿಬ್ಬಂದಿಗೆ ಲಸಿಕೆಯ ತರಬೇತಿ ನೀಡಲಾಗಿದ್ದು, ಅವರು ಮನೆಗಳಿಗೆ ತೆರಳಿ ಲಸಿಕೆ ನೀಡಲು ಪ್ರಾರಂಭಿಸಿದ್ದಾರೆ. ಪ್ರತಿ ದಿನ 50 ರಿಂದ 75 ಜಾನುವಾರುಗಳಿಗೆ ಅವರು ಲಸಿಕೆ ನೀಡಬೇಕು ಎಂಬ ಗುರಿ ನೀಡಲಾಗಿದೆ. ಡಾ.ಕೆ.ಎಮ್.ಮೋಹನಕುಮಾರ್ ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ