ಜಿಲ್ಲೆ

ಮಾರಕ ರೋಗಗಳ ನಿಯಂತ್ರಣಕ್ಕೆ ಲಸಿಕೆ ಸಹಕಾರಿ: ಡಾ.ಸತೀಶ್ ಕುಮಾರ್

ಆದರ್ಶ್. ಎಂ.ಕೆ.

ಮಡಿಕೇರಿ: ದಡಾರ, ರುಬೆಲ್ಲಾ ಸೇರಿದಂತೆ ಹಲವು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಲಸಿಕೆಯನ್ನು ಪಡೆಯದ ೫ ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮನವಿ ಮಾಡಿದರು.


ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ಲಸಿಕಾ ವಿಭಾಗದಲ್ಲಿ ಇಂದ್ರಧನುಷ್ ೫.೦ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.


ಕೊಡಗು ಜಿಲ್ಲೆಯ ೨೦೭ ಕಡೆಗಳಲ್ಲಿ ಇಂದ್ರಧನುಷ್ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಬರುವ ದಡಾರ, ರುಬೆಲ್ಲಾ ಸೇರಿದಂತೆ ಹಲವು ರೋಗಗಳನ್ನು ತಡೆಯಲು ಇಂದ್ರಧನುಷ್ ೫.೦ ಸಹಕಾರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ನಿರ್ದೇಶನದಂತೆ ರಾಜ್ಯ ಸರ್ಕಾರ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಕಾರ್ಯಕ್ರಮವನ್ನು ಮೂರು ಸುತ್ತುಗಳ ಮೂಲಕ ಹಮ್ಮಿಕೊಳ್ಳಲಾಗಿದೆ. ಆ.೭ ರಿಂದ ೧೨ ರವರೆಗೆ ಮೊದಲ ಸುತ್ತು, ಸೆ.೧೧ ರಿಂದ ೧೬ ರವರೆಗೆ ೨ ನೇ ಸುತ್ತು ಮತ್ತು ಅ.೯ ರಿಂದ ೧೪ ರವರೆಗೆ ೩ ನೇ ಸುತ್ತಿನಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಪರಿಣಾಮಕಾರಿ ಇಂದ್ರಧನುಷ್ ೫.೦ ಲಸಿಕಾಕರಣ ನಡೆಯಲಿದೆ ಎಂದು ಮಾಹಿತಿ ನೀಡಿದರು.


ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇಂದ್ರಧನುಷ್ ಲಸಿಕಾಕರಣ ಸಂಬಂಧಿಸಿದಂತೆ ೨ ವರ್ಷದೊಳಗಿನ ೧,೧೬೯ ಮಕ್ಕಳನ್ನು ಗುರುತಿಸಲಾಗಿದೆ. ೨ ರಿಂದ ೫ ವರ್ಷದೊಳಗಿನ ೨೩ ಮಕ್ಕಳನ್ನು ಗುರುತಿಸಲಾಗಿದೆ. ೨೭೮ ಗರ್ಭಿಣೀಯರನ್ನು ಗುರುತಿಸಲಾಗಿದ್ದು, ಲಸಿಕೆಯನ್ನು ನೀಡಿದ ಲಸಿಕಾಕರಣ ವಿವರವನ್ನು ಯು-ವಿನ್ ಪೋರ್ಟಲ್‌ನಲ್ಲಿ ದಾಖಲಿಸಿ ಇ-ಲಸಿಕಾ ಕರಣದ ಪ್ರಮಾಣಪತ್ರ ನೀಡಲಾಗುತ್ತದೆ ಎಂದರು.


ಇಂದ್ರಧನುಷ್ ಸರ್ಕಾರದ ಅತೀ ಮುಖ್ಯ ಕಾರ್ಯಕ್ರಮವಾಗಿದ್ದು, ೭ ಮಾರಕ ರೋಗಗಳನ್ನು ತಡೆಯಲು ಈ ಲಸಿಕಾಕರಣ ಸಹಕಾರಿಯಾಗಲಿದೆ. ದಡಾರ ಮತ್ತು ರುಬೆಲ್ಲಾವನ್ನು ನಿರ್ಮೂಲನೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಲಸಿಕಾಕರಣಕ್ಕೆ ಬಿಟ್ಟುಹೋದ ಮಕ್ಕಳು ಮತ್ತು ಗರ್ಭಿಣೀಯರಿಗೆ ಇಂದ್ರಧನುಷ್ ೫.೦ ಲಸಿಕಾಕರಣವನ್ನು ಹಮ್ಮಿಕೊಳ್ಳಲಾಗಿದೆ. ಸಮುದಾಯದಿಂದ ರೋಗವನ್ನು ತಡೆಯಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಬಿಟ್ಟುಹೋದ ಮತ್ತು ಹೊರಗುಳಿದ ೫ ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣೀಯರಿಗೆ ಲಸಿಕಾಕರಣ ಕೊಡಿಸಬೇಕು ಎಂದು ಹೇಳಿದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ ಮಾತನಾಡಿ, ಇಂದ್ರಧನುಷ್ ಅತೀ ಮುಖ್ಯವಾದ ಲಸಿಕಾ ಕಾರ್ಯಕ್ರಮವಾಗಿದೆ. ೫ ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಇಂದ್ರಧನುಷ್ ಲಸಿಕೆ ಪಡೆಯಬೇಕು ಎಂದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಮಾತನಾಡಿ, ಮಕ್ಕಳ ಆರೋಗ್ಯ ಕಾಪಾಡುವುದು ಅತೀ ಮುಖ್ಯವಾಗಿದೆ. ಪೊಲಿಯೋ, ಧನುರ್‌ವಾಯು, ದಡಾರ, ರುಬೆಲ್ಲಾ ಹೀಗೆ ಹಲವು ರೋಗವನ್ನು ತಡೆಯಲು ಚುಚ್ಚುಮದ್ದು ಅವಶ್ಯಕ. ಮಕ್ಕಳ ಬೆಳೆವಣಿಗೆಗೆ ಲಸಿಕಾಕರಣ ಅತೀ ಮುಖ್ಯ ಎಂದರು.


ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಗೋಪಾಲ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಸತೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ.ಎನ್.ಆನಂದ್, ಡಾ.ಸೋಮಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಯು.ಚೇತನ್, ಮಕ್ಕಳ ವಿಭಾಗದ ತಜ್ಞ ವೈದ್ಯ ಡಾ.ಕುಶ್ವಂತ್ ಕೋಳಿಬೈಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕಿ ಸೌಮ್ಯ ಪೊನ್ನಪ್ಪ, ಇತರರು ಇದ್ದರು. ೫ ವರ್ಷದೊಳಗಿನ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಇಂದ್ರಧನುಷ್ ೫.೦ ಲಸಿಕೆ ನೀಡಲಾಯಿತು.