ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಾನುವಾರುಗಳನ್ನು ಬಾಧಿಸುವ ಕಾಲುಬಾಯಿ ಜ್ವರಕ್ಕಿಂತ ಭೀಕರ ಎನಿಸುವ ಚರ್ಮಗಂಟು ಸೋಂಕು ತಡೆಗೆ ಜಿಲ್ಲಾ ಪಶುಪಾಲನ ಇಲಾಖೆ ವತಿಯಿಂದ ಲಸಿಕಾ ಅಭಿಯಾನ ಆರಂಭವಾಗಿದೆ.
ರಾಜ್ಯದಲ್ಲಿ ಪ್ರಸ್ತುತ ಚರ್ಮಗಂಟು ಸೋಂಕು ಕಾಣಿಸಿಕೊಂಡಿಲ್ಲದಿರುವುದು ಸಮಾಧಾನಕರ ವಿಷಯವಾಗಿದ್ದರೂ ನೆರೆ ರಾಜ್ಯಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಲು ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ನವೆಂಬರ್‌ನಿಂದ ಲಸಿಕಾ ಅಭಿಯಾನ ಶುರುಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈರಸ್‌ನಿಂದ ಹರಡುವ ಕಾಯಿಲೆ: ಸಾಮಾನ್ಯವಾಗಿ ಹಸು, ದನ, ಎಮ್ಮೆಗಳನ್ನು ಬಾಧಿಸುವ ಈ ಕಾಯಿಲೆ ವೈರಸ್‌ನಿಂದ ಹರಡುತ್ತದೆ. ಕ್ಯಾಪ್ರಿಫಾಕ್ಸ್ ವೈರಸ್‌ನಿಂದ ಈ ಕಾಯಿಲೆ ಒಂದರಿಂದ ಮತ್ತೊಂದಕ್ಕೆ ಹರಡುತ್ತದೆ ಇದನ್ನು ಸ್ಕಿನ್ ಡೀಸೀಸ್ ಎಂದೂ ಕರೆಯಲಾಗುತ್ತದೆ ದೇಹದ ಬಹುತೇಕ ಭಾಗಗಳಲ್ಲಿ ಕಂಡುಬರುವ ಕೀವು ತುಂಬಿದ ಬಾವು, ಬಾಯಿಯ ಲೋಳೆ ಪೊರೆ, ಮೂಗಿನ ಹೊಳ್ಳೆ , ಕೆಚ್ಚಲು ಮತ್ತು ಜನನಾಂಗದ ಹತ್ತಿರ ಹುಣ್ಣು ಕಾಣಿಸಿಕೊಳ್ಳುತ್ತವೆ ಇವುಗಳ ಮೂಲಕ ಈ ಕಾಯಿಲೆಯನ್ನು ಗುರುತಿಸಬಹುದು.
ವಿರೋಧದ ನಡುವೆ ಮನವೊಲಿಕೆ:ಇತ್ತೀಚಿಗಷ್ಟೆ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನ ಮುಗಿಸಿರುವ ಪಶು ಇಲಾಖೆ ಅಧಿಕಾರಿಗಳು ಮತ್ತೊಂದು ಸುತ್ತಿನಲ್ಲಿ ಚರ್ಮಗಂಟು ರೋಗದ ಲಸಿಕೆ ಅಭಿಯಾನ ಆರಂಭಿಸಿರುವುದು ಕೆಲವು ಕಡೆ ರೈತರಿಂದ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಲಸಿಕೆ ಹಾಕಿಸಿದರೆ ಹಾಲಿನ ಪ್ರಮಾಣ ತಗ್ಗಲಿದೆ ಎಂಬುದು ರೈತರ ಆತಂಕವಾಗಿದೆ. ಆದರೆ ಇದನ್ನು ಸಂಪೂರ್ಣವಾಗಿ ಅಲ್ಲಗೆಳೆದಿರುವ ಅಧಿಕಾರಿಗಳು ಲಸಿಕೆಗೂ ಹಾಲಿನ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಿ ಅವರ ಮನವೊಲಿಸಿ ಚರ್ಮಗಂಟು ಲಸಿಕಾ ಅಭಿಯಾನ ಮುಂದುವರೆಸಿದ್ದಾರೆ.
2.04 ಲಕ್ಷ ಮನೆ:
ಜಿಲ್ಲೆಯಲ್ಲಿ ಅಂದಾಜು 2.04 ಲಕ್ಷ ಮನೆಗಳಲ್ಲಿ ಜಾನುವಾರು ಸಾಕಣೆ ನಡೆಯುತ್ತಿದೆ, ಪ್ರಸ್ತುತ ಜಿಲ್ಲೆಯಲ್ಲಿ 1.87 ಲಕ್ಷ ಜಾನುವಾರುಗಳಿವೆ ಎಂದು ಅಂದಾಜಿಸಲಾಗಿದ್ದು, ಎಲ್ಲ ಜಾನುವಾರುಗಳಿಗೆ ಕಡ್ಡಾಯವಾಗಿ ಚರ್ಮಗಂಟು ಲಸಿಕೆ ಹಾಕುವ ಪ್ರಯತ್ನ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷದ ಹಿಂದೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಚರ್ಮಗಂಟು ಸೋಂಕು ಕಾಣಿಸಿಕೊಂಡಿತ್ತು. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿ ಚಿಕಿತ್ಸೆ ಕೊಡಿಸುವ ಮೂಲಕ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಲಾಗಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಎಲ್ಲಿಯೂ ಈ ಸೋಂಕಿನ ಲಕ್ಷಣ ಕಂಡುಬಂದಿಲ್ಲ ಆದರೂ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಆದೇಶದಂತೆ ಲಸಿಕೆ ನೀಡಲಾಗುತ್ತಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚರ್ಮದ ಮೇಲೆ ಗುಳ್ಳೆಗಳು:ಎಮ್ಮೆಗಳಿಗಿಂತ ದನಗಳಲ್ಲಿ ಈ ರೋಗ ತೀವ್ರವಾಗಿ ಬಾಧಿಸುತ್ತವೆ. ಅತಿಯಾದ ಜ್ವರ, ಜ್ವರ ಪ್ರಾರಂಭವಾದ 48 ಗಂಟೆಗಳಲ್ಲಿ ದೇಹದ ಬಹುತೇಕ ಭಾಗಗಳಲ್ಲಿ 1ರಿಂದ 2 ಸೆಂ.ಮೀ ಗಾತ್ರದ ದದ್ದುಗಳೇಳುತ್ತವೆ. ಅವು ಕ್ರಮೇಣ ಒಡೆದು ಕೀವು ಉಂಟಾಗುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಮಾಡದಿದ್ದರೆ, ಒಡೆದ ಗುಳ್ಳೆಯಲ್ಲಿ ನೊಣಗಳು ಕುಳಿತು ಮತ್ತಷ್ಟು ಉಲ್ಭಣಗೊಳ್ಳುತ್ತದೆ, ಇದರಿಂದ ಹಸುಗಳಲ್ಲಿ ಗರ್ಭಪಾತವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಚರ್ಮಗಂಟು ರೋಗಕ್ಕೆ ನಿಖರವಾದ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ ಎನ್ನಲಾಗಿದೆ ಆದರೆ ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಬಹುತೇಕ ಸೋಂಕು ನಿವಾರಣೆಯಾಗಿ ಜಾನುವಾರುಗಳು ಚೇತರಿಸಿಕೊಳ್ಳುತ್ತವೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಎಲ್ಲಿಯೂ ಚರ್ಮಗಂಟು ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಆದರೆ ಸರ್ಕಾರದ ಅದೇಶದಂತೆ ಮುಂಜಾಗ್ರತಾ ಕ್ರಮವಾಗಿ ಚರ್ಮಗಂಟು ಲಸಿಕೆ ಹಾಕಲಾಗುತ್ತಿದೆ. ಇದಕ್ಕಾಗಿ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಲಸಿಕೆ ಹಾಕುವ ಮೂಲಕ ಭವಿಷ್ಯದಲ್ಲಿ ರಾಸುಗಳು ಈ ಸೋಂಕಿನಿಂದ ಪಾರಾಗಬಹುದು. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಹೈನುಗಾರರು ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸಬೇಕು.
ಡಾ.ಜಗದೀಶ್‌ಕುಮಾರ್, ಉಪನಿರ್ದೇಶಕ ಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರ