ಜಿಲ್ಲೆ

ನ.೨೦ರವರೆಗೆ ಕಾಲುಬಾಯಿ ರೋಗಕ್ಕೆ ಲಸಿಕೆ

ಮಡಿಕೇರಿ: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೬ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ನ.೨೦ ರವರೆಗೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಈ ಸಂಬಂಧ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ ಡಾ.ಪ್ರಸನ್ನ ಕುಮಾರ್ ಮಂಗಳವಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭ ಮಾತನಾಡಿದ ಅವರು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗ ನಿಯಂತ್ರಣದ ೬ನೇ ಸುತ್ತಿನ ಲಸಿಕಾ ಅಭಿಯಾನ ನಡೆಯುತ್ತಿದ್ದು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೬ನೇ ಸುತ್ತಿನ ಕಾಲುಬಾಯಿ ಜ್ವರ ರೋಗ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದನ ಮತ್ತು ಎಮ್ಮೆಗೆ ಕಾಲುಬಾಯಿ ರೋಗ ಕಾಣಿಸಿಕೊಳ್ಳಲಿದ್ದು, ಸರ್ಕಾರದ ನಿರ್ದೇಶನದಂತೆ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ಮನವಿ ಮಾಡಿದರು.

ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಲಿಂಗರಾಜು ದೊಡ್ಡಮನಿ ಮಾತನಾಡಿ, ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಲಸಿಕೆ ನೀಡುವುದು ಅತ್ಯಗತ್ಯವಾಗಿದೆ. ಈ ರೋಗದ ವಿರುದ್ಧ ಪ್ರತೀ ೬ ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಕೊಡಿಸಿ ರೋಗ ಬರದಂತೆ ತಡೆಯುವುದು ಅತ್ಯಗತ್ಯವಾಗಿದೆ. ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದ ಅಭಿಯಾನದಲ್ಲಿ ೬ನೇ ಸುತ್ತಿನಲ್ಲಿ ಲಸಿಕೆ ವಿತರಣೆಗಾಗಿ ಈಗಾಗಲೇ ೫೭ ಸಾವಿರ ಲಸಿಕೆ ಪೂರೈಕೆಯಾಗಿದೆ. ಈಗಾಗಲೇ ೫ನೇ ಸುತ್ತಿನಲ್ಲಿ ೨,೪೫೦ ಲಸಿಕೆ ಉಳಿದಿದ್ದು, ಒಟ್ಟು ೫೯,೪೫೦ ಲಸಿಕೆ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಪಶು ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದು, ರೈತರು, ಜಾನುವಾರು ಮಾಲೀಕರು ಜಾನುವಾರುಗಳಿಗೆ ಲಸಿಕೆ ನೀಡಲು ಸಹಕರಿಸುವಂತೆ ಮನವಿ ಮಾಡಿದ ಅವರು, ಜಿಲ್ಲೆಯಲ್ಲಿ ೨೦ನೇ ಜಾನುವಾರು ಗಣತಿಯಂತೆ ದನ ಹಾಗೂ ಎಮ್ಮೆಗಳ ಸಂಖ್ಯೆ ೭೬,೯೨೦ ಇದ್ದು, ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗೆ ಬಂದಾಗ ಸಹಕಾರ ನೀಡಿ ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಕೋರಿದರು.

೬ನೇ ಸುತ್ತಿಗೆ ಈಗಾಗಲೇ ೭೦ ಸಾವಿರ ಸಿರಿಂಜ್ ಪೂರೈಕೆಯಾಗಿದೆ. ಕಾಲುಬಾಯಿ ಲಸಿಕಾ ಕಾರ್ಯಕ್ರಮ ಕೈಗೊಳ್ಳಲು ಜಿಲ್ಲೆಯಲ್ಲಿ ೧೩ ತಾಂತ್ರಿಕ ಅಧಿಕಾರಿಗಳು, ೩೧ ಅರೆ ತಾಂತ್ರಿಕ ಸಿಬ್ಬಂದಿಗಳು, ೭ಡಿ ದರ್ಜೆ ನೌಕರರು, ೧೩ ಹೊರಗುತ್ತಿಗೆ ನೌಕರರು, ೪ ಮೈತ್ರಿ ಸಿಬ್ಬಂದಿ, ಒಬ್ಬ ಕೆಎಂಎಫ್ ಒಟ್ಟು ೬೯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಲಿಂಗರಾಜ ದೊಡ್ಡಮನಿ ವಿವರಿಸಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೬ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅ.೨೧ ರಿಂದ ಆರಂಭವಾಗಿದ್ದು, ಇದುವರೆಗೆ ಶೇ.೩೬ ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.