ರಾಮನಗರ : ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬಮುಲ್ ಸಹಯೋಗದಲ್ಲಿ ಜಿಲ್ಲೆಯಲ್ಲಿ ಅ.21ರಿಂದ ಒಂದು ತಿಂಗಳು ಜಾನುವಾರುಗಳಿಗೆ 6ನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನ ನಡೆಸಲು ಸಜ್ಜಾಗಿದೆ.
ಕಾಲುಬಾಯಿ ಸೋಂಕು ಸಾಂಕ್ರಾಮಿಕವಾಗಿರುವ ಕಾರಣ ಗೋ ಪಾಲಕರು ತಪ್ಪದೆ ಲಸಿಕೆ ಹಾಕಿಸಿ ಜಾನುವಾರುಗಳನ್ನು ರೋಗದಿಂದ ಮುಕ್ತಗೊಳಿಸಬೇಕು ಎಂಬುದು ಇಲಾಖೆ ಧ್ಯೇಯವಾಗಿದ್ದು, ಪ್ರಸ್ತುತ ಪಶುಪಾಲನಾ ಇಲಾಖೆ ಜತೆ ಬೆಂಗಳೂರು ಹಾಲು ಒಕ್ಕೂಟ ಸಹಯೋಗದಲ್ಲಿ ಯಾವುದೇ ರಾಸು ಕಾಲುಬಾಯಿ ಲಸಿಕೆಯಿಂದ ದೂರ ಉಳಿಯಬಾರದು ಎಂದು ಲಸಿಕಾ ಅಭಿಯಾನ ಮಾಡಲಾಗುತ್ತಿದೆ.
ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ ರಾಸುಗಳ ಬಗ್ಗೆ ಮುತುವರ್ಜಿವಹಿಸಿದಾಗ ರೋಗದಿಂದ ಪಾರಾಗಬಹುದು. ಕಾಲುಬಾಯಿ ರೋಗ ರೈತರಿಗೆ ನಷ್ಟದ ಹಾದಿ ತೋರಿಸಲಿದ್ದು, ಈ ನಷ್ಟದಿಂದ ಪಾರು ಮಾಡಲು ರೈತರ ಮನೆ ಬಾಗಿಲಿಗೆ ಬಂದು ಮೂರು ತಿಂಗಳ ಮೇಲ್ಪಟ್ಟ ಹಸು, ಎತ್ತು, ಎಮ್ಮೆ, ಹೋರಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ರೈತರ ರಾಸುಗಳಿಗೆ ಕಾಲುಬಾಯಿ ರೋಗ ಬರದಂತೆ ತಡೆಯಲು ಅ. 21 ರಿಂದ ನ. 20 ರವರೆಗೆ ಅಭಿಯಾನ ನಡೆಸಲು ಉದ್ದೇಶಿಸಿದ್ದು, ಅಂತೆಯೇ, ಪ್ರತಿ 6 ತಿಂಗಳಿಗೊಮ್ಮೆ ಅಭಿಯಾನ ನಡೆಯುತ್ತಿದ್ದು, ಜಿಲ್ಲೆಯಲ್ಲಿ 3 .7 ಲಕ್ಷ ಜಾನುವಾರುಗಳಿದ್ದು, ಶೇ. 100 ಪ್ರಗತಿ ಸಾಧಿಸುವ ಗುರಿ ಇಲಾಖೆ ಹೊಂದಿದೆ.
ಲಸಿಕಾ ತಂಡ
ಪ್ರತಿ 100 ರಾಸುಗಳಿಗೆ ಒಂದು ವಿಭಾಗ ಮಾಡಲಾಗಿದ್ದು, ಲಸಿಕೆ ನೀಡುವ ಒಂದು ತಂಡ ಮನೆ ಮನೆಗೆ ತೆರಳಿ ಲಸಿಕೆ ಕಾರ್ಯ ನಡೆಸಲಿದೆ. ಈಗಾಗಲೇ ಲಸಿಕೆಗೆ ಒಳಪಡುವ ಹಸು ಎಮ್ಮೆಗಳ ಗಣತಿಯನ್ನು ಪಶುವೈದ್ಯ ಇಲಾಖೆ ಗ್ರಾಮಮಟ್ಟದಲ್ಲಿ ನಡೆಸಿದೆ.
ನಿಯೋಜನೆ
ಲಸಿಕಾ ಅಭಿಯಾನದಲ್ಲಿ 283 ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಬೆಂಗಳೂರು ಹಾಲು ಒಕ್ಕೂಟ ಲಸಿಕಾ ಅಭಿಯಾನಕ್ಕೆ ಜಿಲ್ಲಾ ವ್ಯಾಪ್ತಿಯಲ್ಲಿ 34 ವಾಹನ ವ್ಯವಸ್ಥೆ ಮಾಡಿದೆ. ಲಸಿಕೆ ಸೇರಿ ಅಭಿಯಾನಕ್ಕೆ ಬೇಕಾಗುವ ಪರಿಕರ ನೀಡಲಾಗಿದೆ. 3 ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಜಾನುವಾರುವಿನಲ್ಲಿ ಕಾಲುಬಾಯಿ ರೋಗ ಕಂಡುಬಂದಿಲ್ಲ. ಮನ್ನೆಚ್ಚರಿಕೆಯಾಗಿ 6 ತಿಂಗಳಿಗೊಮ್ಮೆ ಲಸಿಕಾ ಅಭಿಯಾನ ಯಶಸ್ವಿಯಾಗಿ ಸರ್ಕಾರದ ಮಾರ್ಗಸೂಚಿ ಅನ್ವಯ ಬಮುಲ್ ಸಹಕಾರದಲ್ಲಿ ಮನೆ ಮನೆಗೆ ತೆರಳಿ ರಾಸುಗಳಿಗೆ ಲಸಿಕೆ ಹಾಕಲಾಗುತ್ತದೆ ಎನ್ನುತ್ತಾರೆ ಪಶುಪಾಲನಾ ಇಲಾಖೆ ವೈದ್ಯರು.
ಮೂಢ ನಂಬಿಕೆ ಬೇಡ
ರಾಸುಗಳಿಗೆ ಲಸಿಕೆ ಹಾಕಿಸಿದರೆ ರಾಸುಗಳಲ್ಲಿ ಹಾಲು ಕಡಿಮೆಯಾಗುತ್ತದೆ, ಗರ್ಭಧರಿಸಿದ ರಾಸುಗಳಿಗೆ ತೊಂದರೆ ಉಂಟಾಗುತ್ತದೆ ಎಂಬ ಮೂಢನಂಬಿಕೆಯಲ್ಲಿ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಾರೆ. ಆದರೆ ಲಸಿಕೆಯಿಂದ ಯಾವ ಅಡ್ಡ ಪರಿಣಾಮ ಆಗುವುದಿಲ್ಲ. ಮೂಢನಂಬಿಕೆ ಬದಿಗೊತ್ತಿ ಲಸಿಕೆ ಹಾಕಿಸಿದರೆ ಜಾನುವಾರುಗಳನ್ನು ಕಾಲುಬಾಯಿ ರೋಗದಿಂದ ಮುಕ್ತ ಮಾಡಬಹುದು ಎನ್ನುತ್ತಾರೆ ಪಶುಪಾಲನಾ ಅಧಿಕಾರಿಗಳು.
ರೋಗ ಲಕ್ಷಣ
ಅತಿಯಾದ ಜ್ವರ, ಬಾಯಿ ಮತ್ತು ವಸಡುಗಳಲ್ಲಿ ಹುಣ್ಣಾಗುವುದು ಅತಿಯಾದ ಜೊಲ್ಲು ಸೋರುವಿಕೆ, ಮೇವು ತಿನ್ನದಿರುವುದು, ಹಾಲಿನ ಇಳುವರಿ ಕುಂಠಿತಕಾಣುವುದು, ರೋಗದಿಂದ ಗುಣಮುಖವಾದರೂ ಗರ್ಭ ಧರಿಸದಿರುವುದು, ಹಾಲಿನಲ್ಲಿ ಗುಣಮಟ್ಟ ಕಡಿಮೆಯಾಗುವುದು ಕಾಲುಬಾಯಿ ರೋಗದ ಲಕ್ಷಣಗಳಾಗಿವೆ.
ಮುನ್ನೆಚ್ಚರಿಕೆ
ಕಾಲುಬಾಯಿ ರೋಗಕ್ಕೆ ಲಸಿಕೆಯೊಂದೇ ಬಾಣವಾಗಿದ್ದು, ಪ್ರತೀ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ ಮುನ್ನೆಚ್ಚರಿಕೆ ವಹಿಸಿದರೆ ಕಾಲುಬಾಯಿ ರೋಗದಿಂದ ರಾಸುಗಳನ್ನು ದೂರ ಇರಿಸಬಹುದು ಎಂಬುದು ಪಶು ವೈದ್ಯರು ಹೇಳುವ ಮಾತು.
ಜಿಲ್ಲೆಯಲ್ಲಿ ಪಶುಲಾನಾ ಇಲಾಖೆ ಬಮೂಲ್ ಸಹಕಾರದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಯಶಸ್ವಿಯಾಗಿಸಲು ಮುಂದಾಗಿದೆ. ಅ. 21 ರಿಂದ ನ.20 ರವರೆಗೆ ಅಭಿಯಾನ ನಡೆಯಲಿದೆ. ರೈತರ ಸಹಕಾರದಲ್ಲಿ ಶೇ. 100 ಪ್ರಗತಿ ಸಾಧಿಸುವ ವಿಶ್ವಾಸವಿದೆ.- ಡಾ. ಅಸಾದುಲ್ಲಾ ಷರೀಫ್, ಉಪ ನಿರ್ದೇಶಕರು (ಆಡಳಿತ) ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ರಾಮನಗರ.