ಜಿಲ್ಲೆ

ಪಶುಗಳಿಗೆ ಮೊದಲ ಸಲ ಡಬಲ್ ಲಸಿಕೆ!

ಜಗದೀಶ ಹೊಂಬಳಿ ಬೆಳಗಾವಿ

ಪಶುಗಳನ್ನು ಕಾಡುವ ಚರ್ಮಗಂಟು ರೋಗ ಹಾಗೂ ಕಾಲುಬಾಯಿ ಜ್ವರ ತಡೆಗೆ ಮುಂಜಾಗ್ರತಾ ಕ್ರಮವಾಗಿ ಇದೇ ಮೊದಲ ಸಲ ಒಂದೇ ಬಾರಿ ಎರಡೂ ಲಸಿಕೆ ನೀಡುವ ಅಭಿಯಾನಕ್ಕೆ ಪಶುಪಾಲನಾ ಇಲಾಖೆ ಮುಂದಾಗಿದೆ. ಈ ಮೂಲಕ ಪಶುಗಳ ರೋಗ ನಿರೋಧಕ ಶಕ್ತಿ ದ್ವಿಗುಣಗೊಳಿಸುವುದರೊಂದಿಗೆ ಸಿಬ್ಬಂದಿ ಸಮಯ, ವೆಚ್ಚ ಉಳಿತಾಯಕ್ಕೂ ಶ್ರಮವಹಿಸುತ್ತಿದೆ.

ಎರಡೂ ಲಸಿಕೆಗಳನ್ನು ಒಂದೇ ಬಾರಿ ಹಾಕಿದರೆ ಯಾವುದೇ ಸಮಸ್ಯೆಯಾಗದು, ಇನ್ನು ಪಶುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಒಂದೇ ಬಾರಿಗೆ ಎರಡು ಲಸಿಕೆ ಹಾಕಲಾಗುತ್ತಿದೆ. ಅಲ್ಲದೇ ಎರಡೂ ಲಸಿಕೆಗಳನ್ನು ಒಂದೇ ಬಾರಿ ಹಾಕುವುದರಿಂದ ಸಿಬ್ಬಂದಿ ಕೊರತೆ ಹಾಗೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.

ನಾಳೆಯಿಂದ ಆರಂಭ: ಏ.26ರಿಂದ ಜೂ.4ರವರೆಗೆ ಜಿಲ್ಲಾದ್ಯಂತ ನಡೆಯಲಿರುವ ಲಸಿಕಾ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಮತ್ತು ಚರ್ಮಗಂಟು ರೋಗ ತಡೆ ಗಟ್ಟಲು ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ ಇದಕ್ಕೆ ಬೇಕಾದ ತರಬೇತಿ ನೀಡಲಾಗಿದ್ದು, ದಾಸ್ತಾನನ್ನು ಸಂಗ್ರಹಿಸಲಾಗಿದೆ. ಏ.26ರಂದು ರಾಜ್ಯಾದ್ಯಂತ ಚಾಲನೆ ಸಿಗಲಿದ್ದು, ಜಿಲ್ಲೆಯಲ್ಲೂ ಅಭಿಯಾನದ ಮೂಲಕ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ.

6 ತಿಂಗಳಿಗೊಮ್ಮೆ ಅಗತ್ಯ: ಕಾಲುಬಾಯಿ ಜ್ವರ ಎಲ್ಲ ಸೀಳು ಗೊರಸುಳ್ಳ ಪ್ರಾಣಿಗಳಾದ ದನ, ಎಮ್ಮೆ, ಹಂದಿ, ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ ಮುಂತಾದ ಪ್ರಾಣಿಗಳಲ್ಲಿ ವೈರಾಣುವಿನಿಂದ ಬರುವ ಕಾಯಿಲೆಯಾಗಿದೆ. ಈ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಅತಿಬೇಗನೆ ಒಂದು ರಾಸುವಿನಿಂದ ಇನ್ನೊಂದಕ್ಕೆ ನೇರ ಸಂಪರ್ಕ ಹಾಗೂ ಗಾಳಿಯ ಮೂಲಕ ಹರಡುತ್ತದೆ. ಇದನ್ನು ನಿಯಂತ್ರಿಸಲು ಪ್ರತಿ 6 ತಿಂಗಳಿಗೊಮ್ಮೆ ನಿರಂತರವಾಗಿ ಲಸಿಕೆ ಹಾಕಿಸುವುದರಿಂದ ಮಾತ್ರ ಸಾಧ್ಯವಾಗಲಿದೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆ ನಡೆಸಿ ಕಂಡುಕೊಂಡಿರುತ್ತಾರೆ. ಕಾಲುಬಾಯಿ ರೋಗ ತಡೆಗಟ್ಟಲು ಲಸಿಕೆ ಹಾಕುವುದೊಂದೇ ಮಾರ್ಗವಾಗಿದ್ದು, ರೋಗದಿಂದ ಪೂರ್ಣ ಸುರಕ್ಷತೆಗಾಗಿ ಸತತ ಕನಿಷ್ಠ 2 ಬಾರಿ ಲಸಿಕೆ ಹಾಕುವುದು ಅತ್ಯಗತ್ಯ. ಆದುದರಿಂದ ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಪ್ರತಿ 6ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ರೈತರು ತಮ್ಮ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಪಶು ವೈದ್ಯರು ಹೇಳುತ್ತಾರೆ.

ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಇನ್ನಿಲ್ಲದಂತೆ ಚರ್ಮಗಂಟು ರೋಗ ಹೈನು ಗಾರರನ್ನು ಕಾಡಿತ್ತು. ಆನಂತರ ಚರ್ಮ ಗಂಟು ರೋಗ ಕಡಿಮೆಯಾಗಿದೆ. ಚರ್ಮ ಗಂಟುರೋಗ ಏನಾದರೂ ಕಂಡುಬಂದರೆ ಮಾತ್ರ ಲಸಿಕೆ ಹಾಕಲಾಗುತ್ತದೆ. ಆದರೆ, ಈ ಬಾರಿ ರೋಗ ಬಾರದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಚರ್ಮಗಂಟು ರೋಗ ತಡೆಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ.

ಈ ಬಾರಿ ಚರ್ಮಗಂಟು ರೋಗ ಹಾಗೂ ಕಾಲುಬಾಯಿ ಜ್ವರದ ಲಸಿಕೆಯನ್ನು ಒಟ್ಟಿಗೆ ಹಾಕಲಾಗುತ್ತಿದೆ. ಒಂದೇ ಬಾರಿ 2 ಲಸಿಕೆ ಹಾಕುವುದರಿಂದ ಯಾವುದೇ ಸಮಸ್ಯೆಯಿಲ್ಲ. ಇದರಿಂದ ಪಶುಗಳಿಗೆ ಅನುಕೂಲವಾಗಲಿದೆ ಎಂದು ಪಶು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಹೀಗಾಗಿ ಎರಡೂ ಲಸಿಕೆಗಳನ್ನು ಒಂದೇ ಬಾರಿ ಹಾಕಲಾಗುತ್ತಿದೆ. ಇದರಿಂದ ಹೈನುಗಾರರಿಗೆ ಬಹಳಷ್ಟು ಅನುಕೂಲವಾಗಲಿದೆ. ರೈತರು ಅಭಿಯಾನದ ಯಶಸ್ಸಿಗೆ ಸಹಕರಿಸಬೇಕು. ಡಾ.ರಾಜೀವ್ ಕೂಲೇರ, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿ