ವಿಜಯವಾಣಿ ಸುದ್ದಿಜಾಲ ದೇವದುರ್ಗ
ಹುಟ್ಟಿನಿಂದ ಆರು ವರ್ಷದೊಳಗಿನ ಮಕ್ಕಳಲ್ಲಿ ನ್ಯುಮೋನಿಯಾ ರೋಗ ಕಾಣಿಸಿಕೊಳ್ಳುತ್ತಿದ್ದು ಈ ಬಗ್ಗೆ ಪಾಲಕರಿಗೆ ಅರಿವು ಮೂಡಿಸುವುದು ಅಗತ್ಯವಾಗಿವೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಜಾಗೃತಿ ಹಾಗೂ ನ್ಯೂಮೋನಿಯ ತಡೆಗಟ್ಟುವ ಬಗ್ಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಮಗುವಿಗೆ ನ್ಯುಮೋನಿಯಾ ಕಂಡುಬಂದರೆ ಉಸಿರಾಟದ ಸಮಸ್ಯೆಯಾಗಲಿದೆ. ನ.12ರಿಂದ 28ರವರೆಗೆ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು ನ್ಯುಮೋನಿಯಾ ರೋಗದಿಂದ ಮಗುವಿನ ಮರಣ ಪ್ರಮಾಣ ಸೊನ್ನೆಗೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಶ್ವಾಸಕೋಶದಲ್ಲಿ ನ್ಯುಮೋನಿಯಾ ರೋಗಾಣುಗಳು ಉಲ್ಬಣಗೊಳ್ಳುವುದರಿಂದ ಉಸಿರಾಟ ಸಮಸ್ಯೆಯಾಗುತ್ತಿದೆ. ಕೆಮ್ಮು, ನೆಗಡಿ, ಉಸಿರಾಡುವ ಸಮಯಕ್ಕೆ ಪಕ್ಕೆ ಅಥವಾ ಎದೆಯ ಸೆಳೆತ, ಸುಸ್ತು, ತಿನ್ನಲು ಮತ್ತು ಕುಡಿಯಲು ಆಗದಿರುವ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ ತಡಮಾಡದೆ ಚಿಕಿತ್ಸೆ ಕೊಡಿಸಬೇಕು. ಮಗು ಹುಟ್ಟಿದ ಒಂದು ತಾಸಿನೊಳಗೆ ತಾಯಿ ಹಾಲು ಕುಡಿಸಬೇಕು. ಆರು ತಿಂಗಳನಂತರ ಸ್ತನ್ಯಪಾನದ ಜತೆಗೆ ಪೂರಕ ಆಹಾರವನ್ನು ಕೊಡಬೇಕು. ಕುಡಿವ ನೀರು ಮತ್ತು ಆಹಾರವನ್ನು ಸ್ವಚ್ಛವಾಗಿಡಬೇಕು. ಮಗುವನ್ನು ಬೆಚ್ಚಿಗೆ ಇಡಬೇಕು. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುವ ಪದ್ಧತಿ ಅನುಸರಿಸಿದರೆ ರೋಗದಿಂದ ದೂರವಿರಬಹುದು ಎಂದರು.
ಮುಖ್ಯ ವೈದ್ಯಾಧಿಕಾರಿ ಶಿವಾನಂದ, ಮಕ್ಕಳ ತಜ್ಞ ಶಿವಕುಮಾರ ದೇಸಾಯಿ, ಆಯುಷ್ಯ ವೈದ್ಯೆ ನಿರ್ಮಲಾ ದೇವಿ, ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ಗೀತಮ್ಮ, ಚನ್ನಬಸಯ್ಯ, ರಂಗಮ್ಮ ಇತರರಿದ್ದರು.