ಮಂಡ್ಯ: ಸಾರ್ವಜನಿಕರು ಸಾಕು ನಾಯಿ ಮತ್ತು ಬೆಕ್ಕುಗಳಿಗೆ ಕಡ್ಡಾಯವಾಗಿ ರೇಬಿಸ್ ಚುಚ್ಚು ಮದ್ದು ಹಾಕಿಸಿ ಆರೋಗ್ಯದ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು ಎಂದು ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ಜೆ.ಜೆ.ಸುರೇಶ್ ತಿಳಿಸಿದರು.
ಶ್ರೀರಂಗ ಪಟ್ಟಣದ ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಆಸ್ಪತ್ರೆ ಆವರಣದಲ್ಲಿ ಶನಿವಾರ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಸಾಕು ಪ್ರಾಣಿಗಳಿಗೆ ಉಚಿತ ಚುಚ್ಚು ಮದ್ದು ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಯಿ ಅಥವಾ ಬೆಕ್ಕುಗಳಿಂದ ಕಡಿತಕ್ಕೆ ಒಳಗಾದವರು ನಿರ್ಲಕ್ಷಿಸದೆ ಕಡ್ಡಾಯವಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಇದರಿಂದ ಸಾವು ಸಂಭವಿಸುತ್ತದೆ. ಜತೆಗೆ ನಮ್ಮ ಪ್ರಾಣಿಗಳಿಗೂ ಲಸಿಕೆ ಹಾಕಿಸುವುದರಿಂದ ಸುರಕ್ಷತೆ ಕಾಯಲು ಮುಂಜಾಗ್ರತೆ ವಹಿಸಬಹುದು. ಹೀಗಾಗಿ ಸರ್ಕಾರದ ಸೌಲಭ್ಯಗಳನ್ನು ಅಗತ್ಯವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈಗಾಗಲೇ ತಾಲೂಕಿನ ವಿವಿಧೆಡೆಯಿಂದ ಸುಮಾರು 50ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಆಗಮಿಸಿ ಚುಚ್ಚು ಮದ್ದನ್ನು ಪಡೆಯುತ್ತಿದ್ದು, ಇನ್ನು 15 ದಿನಗಳ ಕಾಲ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತದೆ. ಹೀಗಾಗಿ ಜನರು ತಮ್ಮ ಸಾಕುನಾಯಿ ಹಾಗೂ ಬೆಕ್ಕುಗಳೊಂದಿಗೆ ಹತ್ತಿರದ ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.
ಪಶು ವೈದ್ಯರಾದ ಡಾ.ಆನಂದ್ ಕುಮಾರ್, ಡಾ.ರಾಘವೇಂದ್ರ, ಅಭಿವೃದ್ಧಿ ಅಧಿಕಾರಿ ಅನಿಲ್, ಪಶುವೈದ್ಯಕೀಯ ಸಹಾಯಕಿ ಲಾವಣ್ಯ, ಸಿಬ್ಬಂದಿ ರಾಜೇಶ್, ರಂಗಸ್ವಾಮಿ ಇದ್ದರು.