ಸಿರಿಗೇರಿ ಗ್ರಾಮದಲ್ಲಿ ಬೀದಿ ಮತ್ತು ಸಾಕಿದ ನಾಯಿಗಳಿಗೆ ಪಶು ವೈದ್ಯಕೀಯ ಪರೀಕ್ಷಿಕ ಬಿ ವಿಜಯಕಾಂತ್ ರೇಬಿಸ್ ಲಸಿಕೆ ನೀಡಿದರು. 
ಜಿಲ್ಲೆ

ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಿ

ಗಾಯತ್ರಿ ಮಾಲಿಪಾಟೀಲ್

ಸಿರಿಗೇರಿ: ರೇಬಿಸ್ ನಾಯಿಗಳಲ್ಲಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಹಾಗಾಗಿ ಲಸಿಕೆ ಹಾಕುವುದು ಅತ್ಯವಶ್ಯಕ ಎಂದು ಪಶು ವೈದ್ಯಕೀಯ ಪರೀಕ್ಷಕ ಬಿ.ವಿಜಯಕಾಂತ್ ಹೇಳಿದರು.

ಗ್ರಾಮದ ಪಶು ಚಿಕಿತ್ಸಾಲಯ ಕೇಂದ್ರದಲ್ಲಿ ಪಶು ಸಂಗೋಪನೆ ಇಲಾಖೆಯಿಂದ ವಿಶ್ವ ರೇಬಿಸ್ ನಿರ್ಮೂಲನಾ ಮಾಸಾಚರಣೆ ನಿಮಿತ್ತ ಭಾನುವಾರ ಸಾಕಿದ ನಾಯಿ ಹಾಗೂ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿ ಮಾತನಾಡಿದರು. ನಾಯಿಗಳಿಗೆ ಹುಚ್ಚು ಹರಡುವ ಮುನ್ನ ಮುಂಜಾಗೃತ ಕ್ರಮವಾಗಿ ಲಸಿಕೆ ಕೊಡಿಸಿದರೆ ಆರೋಗ್ಯ ಸ್ಥಿರವಾಗಿರುತ್ತದೆ. ಅಲ್ಲದೆ ಹುಚ್ಚು ನಾಯಿಗಳ ಹಾವಳಿ ತಪ್ಪುತ್ತದೆ. ಸಾಕಿದ ನಾಯಿಗಳ ಜತೆ ಬೀದಿ ನಾಯಿಗಳನ್ನು ಕರೆತಂದು ಲಸಿಕೆ ಕೊಡಿಸಬೇಕು ಎಂದು ತಿಳಿಸಿದರು.

ಸೆ.28ರಿಂದ ಅ.28ರವರೆಗೆ ಲಸಿಕೆ ಅಭಿಯಾನ ನಡೆಯಲಿದೆ. ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ನಾಯಿಗಳನ್ನು ಕರೆತಂದು ಚಿಕಿತ್ಸೆ ಕೊಡಿಸಿ ಎಂದು ಕೋರಿದರು. 20ಕ್ಕೂ ಹೆಚ್ಚು ನಾಯಿಗಳಿಗೆ ಲಸಿಕೆ ನೀಡಲಾಯಿತು.