ಜಿಲ್ಲೆ

ಮೂಢನಂಬಿಕೆ ಬಿಟ್ಟು ಪಶುಗಳಿಗೆ ಲಸಿಕೆ ಕೊಡಿಸಿ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಸಲಹೆ

Bengaluru Rural

ನಂದಗುಡಿ: ಜಾನುವಾರುಗಳಿಗೆ ರೋಗ ಬಂದರೆ ರೈತರು ದೇವರ ಮೊರೆಹೋಗುತ್ತಾರೆ. ಇದರಿಂದ, ರಾಸುಗಳು ಮರಣ ಹೊಂದಿ ಸಾವಿರಾರು ರೂ. ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಸ್ಥೈರ್ಯ ಕುಸಿಯುತ್ತಿದೆ. ಇದರ ಬದಲು ಲಸಿಕೆ ಹಾಕಿಸಿದರೆ ಈ ಎಲ್ಲ ತೊಂದರೆಗಳಿಂದಲೂ ಮುಕ್ತಿ ಸಿಗುತ್ತದೆ ಎಂದು ನಂದಗುಡಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಡಿ.ಆರ್. ವೆಂಕಟೇಶ್ ಹೇಳಿದರು.

ಪಶುಸಂಗೋಪನೆ ಇಲಾಖೆ ಮತ್ತು ಬಮುಲ್ ಸಹಯೋಗದಲ್ಲಿ ನಂದಗುಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಲುಬಾಯಿ ರೋಗ ತಡೆ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲುಬಾಯಿ ರೋಗ ಮುಖ್ಯವಾಗಿ ನಾಲ್ಕು ಕಾಲಿನ ಗೊರಸುಗಳುಳ್ಳ ಹಸು, ಮೇಕೆ, ಕುರಿ, ಹಂದಿ ಪ್ರಾಣಿಗಳಲ್ಲಿ ಅತ್ಯಂತ ವೇಗವಾಗಿ ಹರಡುವ ಅಂಟು ರೋಗ. ಈ ರೋಗಕ್ಕೆ ಮುಖ್ಯ ಕಾರಣ ಎಫ್‌ಎಂಡಿವಿಎಂ ವೈರಸ್. ಕಾಲು ಬಾಯಿ ರೋಗಕ್ಕೆ ಇರುವ ಸಿದ್ಧೌಷಧ ಎಂದರೆ ಸಜೀವ ವೈರಾಣುಗಳಿಂದ ತಯಾರಿಸಿದ ಲಸಿಕೆ. ಇದನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನಾದ್ಯಂತ ಕೇಂದ್ರ ಸರ್ಕಾರದ ಯೋಜನೆಯಡಿ ಕಾಲುಬಾಯಿ ಜ್ವರದ ಲಸಿಕೆ ಅಭಿಯಾನವನ್ನು ಅ.2ರಿಂದ ಆರಂಭಿಸಲಾಗಿದ್ದು, ನ.15ರವರೆಗೆ ಮುಂದುವರಿಯಲಿದೆ. ನಂದಗುಡಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಂದಾಜು 500 ರಾಸುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗಿದೆ. ತಾಲೂಕಿನಾದ್ಯಂತ ಅಂದಾಜು 40,000 ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಜಾನುವಾರು ಅಧಿಕಾರಿ ಮಾರುತಿ, ನಂದಗುಡಿ ಎಂಪಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ನಾರಾಯಣಸ್ವಾಮಿ, ಹಾಲು ಪರೀಕ್ಷಕ ಮಂಜುನಾಥ್ ಮತ್ತಿತರರಿದ್ದರು.