ಜಿಲ್ಲೆ

ಲಸಿಕೆಯಲ್ಲಿ ಶೇ.92 ಗುರಿ ಸಾಧನೆ ; ಆದ್ಯತೆ ಮೇರೆಗೆ ಪೋಲಿಯೋ ಹನಿ ಹಾಕಲು ಡಿಸಿ ಸೂಚನೆ

Tumakuru

ತುಮಕೂರು : ಜಿಲ್ಲಾದ್ಯಂತ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದಡಿ ಎರಡನೇ ಹಂತದಲ್ಲಿ ಶೇ.100 ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಮಕ್ಕಳಿಗೆ ಮೊದಲನೇ ದಿನ 2,02,034 ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಶೇ.92 ಗುರಿ ಸಾಧಿಸಲಾಗಿದೆ ಎಂದರು.

ವಿಶೇಷವಾಗಿ ವಲಸೆ ಬಂದಿರುವ ಸಮುದಾಯ, ಲಸಿಕಾ ವಂಚಿತ ಪ್ರದೇಶ, ಕೊಳಚೆ ಪ್ರದೇಶ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಆದ್ಯತೆಯ ಮೇರೆಗೆ ಪಲ್ಸ್ ಪೋಲಿಯೋ ಹನಿ ನೀಡಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಕರೊನಾ ಮೂರನೇ ಅಲೆಯು ನಿಯಂತ್ರಣದಲ್ಲಿದೆ. ಆದರೆ, ಎರಡನೇ ಡೋಸ್ ಲಸಿಕಾಕರಣ ಪೂರ್ಣಗೊಂಡಿಲ್ಲ. ಆದ್ದರಿಂದ ಮಾ.2ರಂದು ಗ್ರಾಮೀಣ ಹಾಗೂ ಶುಕ್ರವಾರ ನಗರ ಪ್ರದೇಶಗಳಲ್ಲಿ ಲಸಿಕಾ ಮೇಳ ನಡೆಸಿ ಲಸಿಕಾಕರಣದ ನಿಗದಿತ ಗುರಿ ಪೂರ್ಣಗೊಳಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಕರೊನಾದಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯಿಂದ 1047 ಅರ್ಜಿಗಳು ಸ್ವೀಕೃತಗೊಂಡಿದ್ದು, 857 ಮಂದಿ ಮೃತರ ವಾರಸುದಾರರಿಗೆ ಪರಿಹಾರ ಧನ ವಿತರಿಸಲಾಗಿದೆ. ಉಳಿದ 190 ಅರ್ಜಿಗಳಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ನಿಗದಿತ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದರು.

ಪಹಣಿ ಒಟ್ಟುಗೂಡಿಸುವಿಕೆ, ಪಹಣಿ ಕಾಲಂ,3/9 ಮಿಸ್‌ಮ್ಯಾಚ್, ಭೂಮಿ ಪೆಂಡೆನ್ಸಿ ಕುರಿತು ಯಾವುದೇ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ತಹಸೀಲ್ದಾರ್‌ಗಳಿಗೆ ಸೂಚಿಸಿದರಲ್ಲದೆ, ಕಂದಾಯ ಗ್ರಾಮಗಳ ರಚನೆ ಸಂಬಂಧ ಅಧಿಕಾರಿಗಳು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಭೂಮಿ ಕಾಯ್ದಿರಿಸುವುದು, ಸಕಾಲ, ನಾಡಕಚೇರಿ ಪ್ರಗತಿ ಪರಿಶೀಲನೆ ಹೇಮಾವತಿ, ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ಎತ್ತಿನಹೊಳೆ ಯೋಜನೆಗಳ ಭೂಸ್ವಾಧೀನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ವಿ.ಅಜಯ್, ಡಿಎಚ್‌ಒ ಡಾ.ಎಂ.ಬಿ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್ ದಾಸ್, ತಹಸೀಲ್ದಾರ್ ಮೋಹನಕುಮಾರ್ ಇದ್ದರು.

ಪಲ್ಸ್ ಪೋಲಿಯೋ ಶೇ.92.67 ಸಾಧನೆ : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಮೊದಲ ದಿನ 0-5 ವರ್ಷದೊಳಗಿನ 2,02,034 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಮೂಲಕ ಶೇ.92.67 ಗುರಿ ಜಿಲ್ಲೆಯಲ್ಲಿ ಸಾಧಿಸಲಾಗಿದೆ.

ಜಿಲ್ಲಾದ್ಯಂತ 218023 ಮಕ್ಕಳಿಗೆ ಲಸಿಕೆ ಹಾಕಲು ಗುರಿ ಹೊಂದಲಾಗಿತ್ತು. ಈ ಪೈಕಿ ಚಿಕ್ಕನಾಯಕನಹಳ್ಳಿ ತಾಲೂಕಿನ 14979(ಶೇ.96.84), ಗುಬ್ಬಿ-18812(ಶೇ.94.97), ಕೊರಟಗೆರೆ-11441 (ಶೇ.92.80), ಕುಣಿಗಲ್-18553(ಶೇ.97.50), ಮಧುಗಿರಿ-18353(ಶೇ.92.78), ಪಾವಗಡ-20591(ಶೇ.79.37); ಶಿರಾ-26157(ಶೇ.94.30), ತಿಪಟೂರು-14076(ಶೇ.95.78); ತುಮಕೂರು-48806(ಶೇ.92.50) ಹಾಗೂ ತುರುವೇಕೆರೆ ತಾಲೂಕಿನಲ್ಲಿ 10266(ಶೇ.98.02) ಮಕ್ಕಳು ಒಟ್ಟು 202034 ಮಕ್ಕಳಿಗೆ ಲಸಿಕೆ ನೀಡಲಾಗಿದೆ.