ಮಂಗಳೂರು : ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿ ಆಗಿರುವ ತಪ್ಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಆರಾಮವಾಗಿ ಇದ್ದರೆ ಒಳ್ಳೆಯದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಹಳೇ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ನಮ್ಮ ಜತೆಯಿದ್ದ ಸಿದ್ದರಾಮಯ್ಯ ಇಂದು ಇಲ್ಲ. 10-12 ಸೈಟ್‌ಗಾಗಿ ಅವರು ಈ ಮಟ್ಟಕ್ಕೆ ಯೋಚನೆ ಮಾಡುತ್ತಾರೆ ಎನ್ನುವುದು ನನಗಂತೂ ಗೊತ್ತಿರಲಿಲ್ಲ ಎಂದರು.
ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ನೋಡಿದ್ದೆನೆ. ಅಂತಹವರು ಯಾವುದೋ ಒಂದು ಸಣ್ಣ ವಿಚಾರದಲ್ಲಿ ತನ್ನತನ ಕಳಕೊಂಡಿದ್ದಾರೆ ಎನ್ನುವ ನೋವಿದೆ. ಮುಡಾ ಹಗರಣವನ್ನು ಸಿಎಂ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಒಳ್ಳೆಯದಲ್ಲ. ತಪ್ಪು ಒಪ್ಪಿಕೊಳ್ಳಬೇಕಿತ್ತು. ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣದ ವಿಸಯ ಸಿದ್ದರಾಮಯ್ಯ ಅವರಿಗೆ ತಿಳಿದಿದೆ. ಅವರು ನೈತಿಕ ಹೊಣೆ ಹೊರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನಿನ ಕುಣಿಕೆ ಸುತ್ತಿಕೊಳ್ಳಲಿದೆ ಎಂದು ಅವರು ಹೇಳಿದರು.
ವಾಸ್ತವಾಂಶ ಮುಚ್ಚಿ ಹಾಕಲು ಆಗುವುದಿಲ್ಲ. ಅದನ್ನು ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು. ಬೇರೆಯವರ ಬಗ್ಗೆ ಹೇಗೆ ನಡೆದುಕೊಂಡರು ಎನ್ನುವುದಕ್ಕಿಂತಲೂ ಸಿದ್ದರಾಮಯ್ಯ ಇವರೇನಾ ಎಂಬ ಸಂಶಯ ಮೂಡುತ್ತಿದೆ. ಅದನ್ನು ಅವರು ತಿದ್ದಿಕೊಂಡು
ಜನರಿಗೆ ವಾಸ್ತವಾಂಶ ತಿಳಿಸಲಿ. ಆಗ ಅವರು ಹಳೇ ಸಿದ್ದರಾಮಯ್ಯ ಆಗುತ್ತಾರೆ ಎಂದು ಸಚಿವ ಸೋಮಣ್ಣ ಹೇಳಿದರು.
ಮಾಜಿ ಸಚಿವ ನಾಗೇಂದ್ರ ಅವರ ಪತ್ನಿ ಬಂಧನ ಯಾಕಾಗಿದೆ ಎನ್ನುವ ಮಾಹಿತಿ ಇಲ್ಲ. ನಾಗೇಂದ್ರ ಅವರು ತಪ್ಪು ಮಾಡಿರುವುದು ಸಾಬೀತು ಆದ ಹಾಗಿದೆ. ವಾಲ್ಮೀಕಿ ನಿಗಮ ಹಗರಣದ ಹಣ ಬಳ್ಳಾರಿ ಚುನಾವಣೆಗೆ ಮಾತ್ರವಲ್ಲ, 187 ಕೋಟಿ ರೂ. ಬೇರೆ ಬೇರೆ ಕಡೆ ಹೋಗಿರುತ್ತದೆ ಎಂದು ಅವರು ಹೇಳಿದರು.
* ರೈಲ್ವೆ ಇಲಾಖೆಯಿಂದ ಮುನ್ನೆಚ್ಚರಿಕೆ
ಉತ್ತರ ಕನ್ನಡದ ಶಿರೂರು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿತ ವಿಚಾರದ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಣ್ಣ ಅವರು ‘ ರೈಲ್ವೆ ಇಲಾಖೆ ತನ್ನದೇ ಆದ ವ್ಯವಸ್ಥೆಯಲ್ಲಿ ಪಾಕೃತಿಕ ವಿಕೋಪ ನಿರ್ವಹಣೆ ಮಾಡುತ್ತಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ಗೆ
ಭಿನ್ನವಾಗಿ ರೈಲ್ವೆ ಇಲಾಖೆಯಲ್ಲಿ ವ್ಯವಸ್ಥೆಗಳಿವೆ. ಇದಕ್ಕಾಗಿ ವಾರ್ ರೂಂ ಮಾಡಲಾಗಿದೆ. ಪ್ರತಿಯೊಂದು ಕಡೆಗಳಲ್ಲೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಈ ಬಾರಿ ಮಳೆ ತುಂಬಾ ಜಾಸ್ತಿ ಆಗುತ್ತಿದೆ. ಮಳೆಯ ಕಾರಣದಿಂದ ಗೂಡ್ಸ್, ಪ್ಯಾಸೆಂಜರ್ ರೈಲು ನಿಲ್ಲಬಾರದು . ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.