ಜಿಲ್ಲೆ

ವಿರಾಜಪೇಟೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸ್ಪರ್ಧೆ

reportermys

ಮಡಿಕೇರಿ:

ಕೊಡಗಿನಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ರೋಚಕ ಹಣಾಹಣಿಗೆ ವೇದಿಕೆ ಸೃಷ್ಟಿಸಿದೆ. ಜಿಲ್ಲೆಯ ಮಟ್ಟಿಗೆ ಇದು ಹೈ ವೋಲ್ಟೇಜ್ ಕ್ಷೇತ್ರ ಎಂದೇ ಬಿಂಬಿಸಲಾಗುತ್ತಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಕದನ ಏರ್ಪಟ್ಟಿದೆ. ಜೆಡಿಎಸ್ ಸ್ಪರ್ಧೆಯಲ್ಲಿದ್ದರೂ ಅಷ್ಟಾಗಿ ಸದ್ದು ಮಾಡುತ್ತಿಲ್ಲ.

ವಿರಾಜಪೇಟೆಯಲ್ಲಿ ಬಿಜೆಪಿಯಿಂದ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಕಣದಲ್ಲಿ ಇದ್ದಾರೆ. ೭೧ ವರ್ಷದ ಬೋಪಯ್ಯ ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದವರು. ಇದೀಗ ೫ನೇ ಬಾರಿ ಕಣದಲ್ಲಿ ಇದ್ದಾರೆ. ಅಪ್ಪಚ್ಚು ರಂಜನ್ ಅವರಂತೆ ಇವರಿಗೂ ಇದು ಕೊನೆಯ ಚುನಾವಣೆ. ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ತಮ್ಮನ್ನು ಗುರಿ ಸೇರಿಸುತ್ತದೆ ಎಂದು ಬಲವಾಗಿ ನಂಬಿರುವ ಬೋಪಯ್ಯ ಈ ಆಧಾರದಲ್ಲೇ ಮತ ಬೇಟೆ ನಡೆಸುತ್ತಿದ್ದಾರೆ.

ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಕಾಂಗ್ರೆಸ್‌ನಿಂದ ಸ್ಫರ್ಧೆಯಲ್ಲಿದ್ದಾರೆ. ಹಿರಿಯ ಧುರೀಣ ಎ.ಕೆ. ಸುಬ್ಬಯ್ಯ ಅವರ ಪುತ್ರರಾಗಿರುವ ಪೊನ್ನಣ್ಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದಲೇ ಕಳೆದ ೩ ವರ್ಷಗಳಿಂದ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಕ್ಷೇತ್ರ ಮತ್ತು ಮತದಾರರ ಪರಿಚಯ ಮಾಡಿಕೊಂಡಿದ್ದಾರೆ. ಸಾಮಾಜಿಕ ಚಟುವಟಿಕೆ, ದಾನ, ಧರ್ಮಗಳ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗಲು ಪ್ರಯತ್ನಿಸಿದ್ದಾರೆ.

ಜೆಡಿಎಸ್‌ನಿಂದ ಎಂ.ಎ. ಮನ್ಸೂರ್ ಅಲಿ ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರು ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದವರು. ಈ ಕ್ಷೇತ್ರದಲ್ಲಿ ಸ್ಪರ್ಧಿಸಲೇಬೇಕು ಎನ್ನುವ ಕಾರಣಕ್ಕೆ ಅನಿವಾರ್ಯವಾಗಿ ಮನ್ಸೂರ್ ಅಲಿ ಅವರನ್ನು ಇಲ್ಲಿ ಕಣಕ್ಕೆ ಇಳಿಸಿದಂತಿದೆ. ಜೆಡಿಎಸ್ ಮಡಿಕೇರಿ ಕೇತ್ರದಷ್ಟು ಗಂಭೀರವಾಗಿ ವಿರಾಜಪೇಟೆಯಲ್ಲಿ ಚುನಾವಣೆಯನ್ನು ಪರಿಗಣಿಸಿದಂತಿಲ್ಲ.

ವಿರಾಜಪೇಟೆ ಸೇರಿದಂತೆ ಕೊಡಗಿನ ಎರಡು ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎನ್ನುವ ಬೇಡಿಕೆ ಬಿಜೆಪಿಯಲ್ಲಿ ಇತ್ತು. ಆದರೆ ಬದಲಾದ ರಾಜಕೀಯ ಚದುರಂಗದಾಟದಲ್ಲಿ ಪಕ್ಷ ಮತ್ತೆ ಹಳೆಬರಿಗೆ ಟಿಕೆಟ್ ಕೊಟ್ಟಿರುವ ಬಗ್ಗೆ ಮೂಲ ಬಿಜೆಪಿಯಲ್ಲಿ ಇರುವ ಚಿಕ್ಕಪುಟ್ಟ ಅಸಮಾಧಾನಗಳನ್ನು ಸರಿಪಡಿಸಿಕೊಂಡು ಬೋಪಯ್ಯ ಮುನ್ನುಗ್ಗುತ್ತಿದ್ದಾರೆ. ವಿವಿಧ ಕಾರಣಗಳಿಗೆ ಪಕ್ಷದಿಂದ ದೂರ ಉಳಿದಿದ್ದವರನ್ನು ಹತ್ತಿರ ಕರೆದುಕೊಂಡಿದ್ದಾರೆ. ಭೌಗೋಳಿಕವಾಗಿ ಹೆಚ್ಚು ವಿಸ್ತಾರದ ವಿರಾಜಪೇಟೆ ಕ್ಷೇತ್ರದ ಆಳ, ಅಗಲ ಮತ್ತು ಇಲ್ಲಿಯ ಮತದಾರರ ನಾಡಿಮಿಡಿತ ಕಳೆದ ೧೫ ವರ್ಷಗಳಲ್ಲಿ ಸರಿಯಾಗಿ ಅರ್ಥ ಮಾಡಿಕೊಂಡಿರುವುದು ಬೋಪಯ್ಯ ಅವರಿಗೆ ಈಗ ಸಕರಾತ್ಮಕವಾಗಿ ಪರಿಣಾಮ ಬೀರಲಿದೆ. ಶಾಸಕರು ಏನೂ ಕೆಲಸ ಮಾಡಿಲ್ಲ ಎಂದು ಪ್ರತಿಪಕ್ಷಗಳು ದೂರುತ್ತಿದ್ದರೂ ಅವೆಲ್ಲಾ ನಿಜವಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ. ಬಹಳಷ್ಟು ಗ್ರಾಮೀಣ ಪ್ರದೇಶಗಳಿಗೆ ಕಾಂಕ್ರಿಟ್ ರಸ್ತೆ ಸೇರಿ ಅನುಕೂಲ ಸಿಕ್ಕಿದೆ. ಯಾವ ಸಮಯದಲ್ಲಿ ಕರೆ ಮಾಡಿದರೂ ಸ್ಪಂದಿಸುತ್ತಾರೆ ಎನ್ನುವ ಮಾತು ಕ್ಷೇತ್ರದ ಮತದಾರರಿಂದ ಕೇಳಿಬರುತ್ತಿದೆ.

ತನಗೆ ಇದೊಂದು ಅವಕಾಶ ಕೊಡಿ, ಕ್ಷೇತ್ರದ ಚಿತ್ರಣವನ್ನೇ ಬದಲಿಸುತ್ತೇನೆ ಎನ್ನುವ ಭರವಸೆಯೊಂದಿಗೆ ಎ.ಎಸ್. ಪೊನ್ನಣ್ಣ ಭರದ ಪ್ರಚಾರ ನಡೆಸುತ್ತಿದ್ದಾರೆ. ಒಂದೊಂದು ದಿಕ್ಕಿಗೆ ಎಳೆದಾಡುತ್ತಿದ್ದ ಕಾಂಗ್ರೆಸ್ ನಾಯಕರನ್ನು ಒಂದಡೆ ಸೇರಿಸುವಲ್ಲಿ ಯಶಸ್ವಿಯಾಗಿರುವ ಪೊನ್ನಣ್ಣ, ಕೊಡಗಿನಲ್ಲಿ ಕಾಂಗ್ರೆಸ್ ಗತ ಇತಿಹಾಸವನ್ನು ಪುನರ್‌ಸ್ಥಾಪಿಸಲು ಪಣತೊಟ್ಟಂತಿದೆ. ೨೦೧೮ರ ಚುನಾವಣೆಯಲ್ಲಿ ಬಿಜೆಪಿ ಶೇ. ೪೯.೪೦ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್ ಶೇ.೪೦.೯೫ರಷ್ಟು ಮತ ಗಳಿಸಿತ್ತು. ೨೦೧೩ರಲ್ಲಿ ಬಿಜೆಪಿ ಶೇ. ೪೭.೨೩, ಕಾಂಗ್ರೆಸ್ ಶೇ. ೪೪.೮೪ ಮತ ಗಳಿಸಿತ್ತು. ಹಾಗಾಗಿ ಈಗ ಸ್ವಲ್ಪ ಕಠಿಣ ಶ್ರಮ ಹಾಕಿದರೆ ಗೆಲುವಿನ ಗುರಿ ಕಷ್ಟವಲ್ಲ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ.

ಒಟ್ಟು ಮತದಾರರ ಪೈಕಿ ಸುಮಾರು ೩೮ ಸಾವಿರದಷ್ಟು ಸಂಖ್ಯೆಯಲ್ಲಿ ಇರುವ ಮುಸಲ್ಮಾನರು ವಿರಾಜಪೇಟೆ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇಲ್ಲಿ ಈಗ ಜೆಡಿಎಸ್‌ನಿಂದ ಒಬ್ಬರು ಸೇರಿ ಒಟ್ಟು ಮೂವರು ಮುಸ್ಲಿಂ ಅಭ್ಯರ್ಥಿಗಳು ಇದ್ದಾರೆ. ಮುಸ್ಲಿಂ ಮತಗಳು ಚದುರಿದಷ್ಟೂ ಬಿಜೆಪಿಗೆ ಲಾಭ ಆಗುತ್ತದೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಒಂದು ಕ್ಷೇತ್ರದ ಫಲಿತಾಂಶ ಬದಲಿಸುವಷ್ಟರ ಮಟ್ಟಿಗೆ ಮತಗಳನ್ನು ಸೆಳೆಯುವಷ್ಟು ಪ್ರಭಾವಿಗಳೇ ಎನ್ನುವ ಪ್ರಶ್ನೆಯೂ ಇದೆ.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸರ್ವೋದಯ ಕರ್ನಾಟಕ ಪಕ್ಷದಿಂದ ವಿರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ರೈತ ಸಂಘದ ಮೂಲಕ ಹಲವಾರು ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಮನು ಸೋಮಯ್ಯ ಅವರಿಂದ ಜಿಲ್ಲೆಯಲ್ಲಿ ಸಾಕಷ್ಟು ಕೆಲಸಗಳು ಆಗಿದೆ. ವನ್ಯಜೀವಿ, ಮಾನವ ಸಂಘರ್ಷ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮುಂದೆ ನಿಂತು ಕಾರ್ಮಿಕರು, ರೈತರು, ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಹಾಗಾಗಿ ಕ್ಷೇತ್ರದ ಜನತೆಗೆ ಇವರ ಬಗ್ಗೆ ಸ್ವಲ್ಪ ಒಲವು ಇದೆ. ಬಿಜೆಪಿ ಮತಗಳಿಗೆ ಇವರು ಕೈ ಹಾಕುವ ಸಾಧ್ಯತೆಗಳೇ ಅಧಿಕ ಎನ್ನಲಾಗುತ್ತಿದೆ.

ಕೊಡಗಿನಲ್ಲಿ ಈತನಕ ಚುನಾವಣೆ ಮೇಲೆ ಜಾತಿ ರಾಜಕಾರಣ ಪ್ರಭಾವ ಬೀರಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ ಎ.ಎಸ್. ಪೊನ್ನಣ್ಣ ಪರ ಕೊಡವರನ್ನು ಒಂದು ಗೂಡಿಸುವ ಪ್ರಯತ್ನ ಕಾಂಗ್ರೆಸ್ ನಡೆಸಿದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಕೊಡವ ಮತ್ತು ಕೊಡವ ಭಾಷಿಕ ಸಮುದಾಯದ ಸುಮಾರು ೪೮ ಸಾವಿರದಷ್ಟು ಮತದಾರರಿದ್ದು, ಜಾತಿ ಅಸ್ತ್ರದ ಮೂಲಕ ಕೊಡವ ಮತದಾರರು ಮತ್ತು ಮುಸ್ಲಿಂ ಮತದಾರರನ್ನು ಸೆಳೆದು ಯಶಸ್ವಿಯಾಗುವ ಹಂಚಿಕೆಯಲ್ಲಿ ಕಾಂಗ್ರೆಸ್ ಇದೆ.
೪ ಬಾರಿ ಗೆದ್ದಿರುವ ಕೆ.ಜಿ. ಬೋಪಯ್ಯ ಎದುರು ಒಂದು ಸಲವೂ ಚುನಾವಣೆ ಎದುರಿಸದ ಎ.ಎಸ್. ಪೊನ್ನಣ್ಣ ಸ್ಪರ್ಧೆ ಮತ್ತು ನೂತನ ಶಾಸಕರ ಗೆಲುವಿನ ಹಿಂದೆ ಜೆಡಿಎಸ್‌ನ ಎಂ.ಎ. ಮನ್ಸೂರ್ ಅಲಿ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಕಾಡ್ಯಮಾಡ ಮನು ಸೋಮಣ್ಣ ಅವರು ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸದ್ಯದ ಕುತೂಹಲ.

ಮತದಾರರ ವಿವರ:
ಒಟ್ಟು ಮತದಾರರು: ೨,೨೪,೧೬೫
ಪುರುಷರು: ೧,೧೧,೨೯೦
ಮಹಿಳೆಯರು: ೧,೧೨,೮೬೨
ಇತರ: ೧೩

೨೦೧೮ರ ಚುನಾವಣಾ ಫಲಿತಾಂಶ:
ಗೆದ್ದವರು: ಕೆ.ಜಿ. ಬೋಪಯ್ಯ
ಪಕ್ಷ: ಬಿಜೆಪಿ
ಪಡೆದ ಮತ: ೭೭,೯೪೪
ಸೋತವರು: ಅರುಣ್ ಮಾಚಯ್ಯ ಸಿ.ಎಸ್.
ಪಕ್ಷ: ಕಾಂಗ್ರೆಸ್
ಪಡೆದ ಮತ: ೬೪,೫೯೧
ಗೆಲುವಿನ ಅಂತರ: ೧೩,೩೫೩

೨೦೧೩ರ ಚುನಾವಣಾ ಫಲಿತಾಂಶ:
ಗೆದ್ದವರು: ಕೆ.ಜಿ. ಬೋಪಯ್ಯ
ಪಕ್ಷ: ಬಿಜೆಪಿ
ಪಡೆದ ಮತ: ೬೭,೨೯೦
ಸೋತವರು: ಬಿದ್ದಾಟಂಡ ಟಿ. ಪ್ರದೀಪ್
ಪಕ್ಷ: ಕಾಂಗ್ರೆಸ್
ಪಡೆದ ಮತ: ೬೩,೮೩೬
ಗೆಲುವಿನ ಅಂತರ: ೩,೪೫೪