ಜಿಲ್ಲೆ

ಸೀತನೂರ್ ಆರ್ಟ್ ಗ್ಯಾಲರಿಗೆ ನಿರ್ದೇಶಕ ಮನೋಹರ ಭೇಟಿ

ಕಲಬುರಗಿ: ನಗರದ ಶರಣನಗರ ಎಚ್.ಕೆ.ಸೀತನೂರ್ ಆರ್ಟ್ ಗ್ಯಾಲರಿಗೆ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಮಂಗಳವಾರ ಭೇಟಿ ನೀಡಿ ವರ್ಣ ವೈಭವದ ಸಡಗರ ಸವಿದರು.
ಹಿರಿಯ ಕಲಾವಿದ ಮೋಹನ್ ಸೀತನೂರ್ ಅವರ ಕೈಯಲ್ಲಿ ಅರಳಿದ ದೈವಿಕ ಸೌಂದರ್ಯದ ಕೌತುಕ ಮತ್ತು ನಮ್ಮ ಜನರ ಬದುಕಿನ ದಾರ್ಶನಿಕ ಪ್ರಜ್ಞೆಗಳ ಬೀಜರೂಪದ ವರ್ಣ ಕಲಾಕೃತಿ ವೀಕ್ಷಿಸಿದರು. ಕಲ್ಯಾಣ ಕರ್ನಾಟಕದ ಮಣ್ಣಿನ ಸೊಗಡು ಬಿಂಬಿಸಿದ ಗ್ಯಾಲರಿಯು ನೋಡುಗರ ಕಣ್ಮನ ಸೆಳೆಯುವಂತಿದೆ ಎಂದು ಮನೋಹರ ಬಣ್ಣಿಸಿದರು.
ಕಾರ್ಗಿಲ್ ಯುದ್ಧದ ಭಯಾನಕ ಸನ್ನಿವೇಶದ ದೃಶ್ಯ ವೀಕ್ಷಿಸಿ ಮೂಕವಿಸ್ಮಿತರಾದರು. ಕಲ್ಯಾಣ ಕರ್ನಾಟಕದ ಗ್ರಾಮ ದೇವತೆಗಳು, ಶಿಶುನಾಳ ಶರೀಫರ ಸೋರುತಿಹುದು ಮನೆಯ ಮಾಳಿಗೆ ಹಾಡಿಗೆ ಪ್ರೇರಿತರಾದ ಸೋರು ವರ್ಣ ಚಿತ್ರಗಳು, ದಿ ವಾಲï ನೀಡುವ ಮೌನ ಸಂದೇಶ ಮುಂತಾದವು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಶಿಲ್ಪಕಲಾವಿದ ಡಾ.ಮಾನಯ್ಯ ಬಡಿಗೇರ್, ಚಲನಚಿತ್ರ ನಿರ್ದೇಶಕ ಮಂಜು ಪಾಂಡವಪುರ, ಕಲಬುರಗಿ ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ, ಕೆ.ಪಿ.ಗಿರಿಧರ್, ಕಲಾವಿದರಾದ ವರದರಾಜ್, ಸಮತಾ ಸೀತನೂರ್, ರಾಹುಲ್ ಸೀತನೂರ್, ರಾಕೇಶ್, ಮಧ್ವೇಶ ಕುಲಕರ್ಣಿ, ನಾರಾಯಣ ಜೋಶಿ, ಲಕ್ಷಿಕಾಂತ ಮನೋಕರ್ ಇದ್ದರು.