ಜಿಲ್ಲೆ

ಉತ್ತರಾಖಂಡದಿಂದ ಬಳ್ಳಾರಿಗೆ ಬಂದ ವ್ಯಕ್ತಿಗೆ ಸೋಂಕು, ಕೌಲ್‌ಬಜಾರ್ ವ್ಯಾಪ್ತಿಯಲ್ಲಿ ಒಂದು ಕಿಮೀ ನಿರ್ಬಂಧ

ಬಳ್ಳಾರಿ: ನಗರದ ಕೌಲ್‌ಬಜಾರ್ ಪ್ರದೇಶದ 43 ವರ್ಷದ ವ್ಯಕ್ತಿಯಲ್ಲಿ ಸೋಮವಾರ ಕರೊನಾ ವೈರಸ್ ಪತ್ತೆಯಾಗಿದೆ. ಕೌಲ್ ಬಜಾರ್ ಪ್ರದೇಶದ 14 ಜನರು ಹಾಗೂ ಆಂಧ್ರಪ್ರದೇಶದ ನಾಲ್ಕು ಜನರು ಮಾ.14ರಂದು ಉತ್ತರಾಖಂಡ ರಾಜ್ಯಕ್ಕೆ ಪ್ರವಾಸಕ್ಕೆ ತೆರಳಿದ್ದರು. ಉತ್ತರಾಖಂಡದ ರೂರ್ಕಿಯಲ್ಲಿದ್ದ ಅವರು ಅಲ್ಲಿನ ಜಿಲ್ಲಾಧಿಕಾರಿಯ ಪಾಸ್ ಪಡೆದು ಭಾನುವಾರ ನಗರಕ್ಕೆ ಆಗಮಿಸಿದ್ದರು. ನಗರದ 14 ಜನರನ್ನು ಮನೆಗೆ ಹೋಗುವ ಮುನ್ನವೇ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೋಂಕಿತನಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಸೋಂಕಿತನೊಂದಿಗೆ ಪ್ರವಾಸದಲ್ಲಿದ್ದ ಇತರ 13 ಜನರನ್ನು ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಪುತ್ರಿ, ಅಳಿಯ ಸೇರಿದಂತೆ ಒಂಬತ್ತು ಜನ ಕುಟುಂಬದವರನ್ನು ಒಳಗೊಂಡಂತೆ 22 ಜನ ಪ್ರಥಮ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಉತ್ತರಾಖಂಡದಿಂದ ಆಗಮಿಸಿದ ಬಳಿಕ ವೈಯಕ್ತಿಕ ಕಾರಣಕ್ಕೆ ವಾಸ ಸ್ಥಾನದ ಸುತ್ತಮುತ್ತ ಸಂಚರಿಸುವ ಮಾಹಿತಿ ಇದ್ದು, ಸಂಪರ್ಕಿತರನ್ನು ಗುರುತಿಸಲಾಗುತ್ತಿದೆ ಎಂದರು.

ಸೋಂಕಿತ ವಾಸವಾಗಿದ್ದ ಮನೆಯಿಂದ ಕೌಲ್ ಬಜಾರ್ ಪ್ರದೇಶದಲ್ಲಿ ಒಂದು ಕಿ.ಮೀ.ರೇಡಿಯಸ್‌ನ್ನು ನಿರ್ಬಂಧಿತ ವಲಯವಾಗಿ ಘೋಷಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು. ಜಿಪಂ ಸಿಇಒ ಕೆ.ನಿತೀಶ ಹಾಜರಿದ್ದರು.

ಆಂಧ್ರದ ಗಡಿಯಲ್ಲಿರುವ ಜಿಲ್ಲೆಯ 21 ಗ್ರಾಮಗಳಲ್ಲಿ ಸಿಬ್ಬಂದಿ ನಿಯೋಜಿಸಿ ಕಣ್ಗಾವಲು ಇರಿಸಲಾಗಿದೆ. ಹೊರ ರಾಜ್ಯದ ಜನರು ಬಂದರೆ ಮಾಹಿತಿ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಮೂರು ವಾಹನಗಳು ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಆಂಧ್ರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಜನರ ಚಲನವಲನದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಗಡಿ ಭಾಗದಲ್ಲಿರುವ ಸಂಬಂಧಿಕರ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.| ಸಿ.ಕೆ.ಬಾಬಾ ಎಸ್ಪಿ ಬಳ್ಳಾರಿ