ರಾಜ್ಯ ಸರ್ಕಾರ ಅರಣ್ಯ ಮತ್ತು ಸರ್ಕಾರಿ ಜಾಗದಲ್ಲಿನ ಮನೆಗಳ ನಂಬರ್ ರದ್ದುಪಡಿಸಲು ಆದೇಶ ಹೊರಡಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಶಿರಸಿ ತಾಲೂಕು ಇಸಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಸಂಸದ ವಿಸ್ವೇಶ್ವರ ಹೆಗಡೆ ಕಾಗೇರಿ, ನವೀನ ಶೆಟ್ಟಿ, ಉಷಾ ಹೆಗಡೆ, ಪ್ರಸನ್ನ ಹೆಗಡೆ ಇತರರಿದ್ದರು.  Protest
ಉತ್ತರ ಕನ್ನಡ

ನೋಟಿಸ್ ನೀಡಿದ್ರೆ ಗ್ರಾಪಂ ಒಳಗೆ ನುಗ್ಗಿ ಹೋರಾಟ Cancellation of house numbers

ಅರಣ್ಯ ಮತ್ತು ಸರ್ಕಾರಿ ಜಾಗದಲ್ಲಿನ ಮನೆಗಳ ನಂಬರ್ ರದ್ದುಪಡಿಸಲು ಆದೇಶಕ್ಕೆ ವಿರೋಧ

ವಿಜಯವಾಣಿ ಸುದ್ದಿಜಾಲ ಶಿರಸಿ

ಅರಣ್ಯ ಮತ್ತು ಸರ್ಕಾರಿ ಭೂಮಿಯಲ್ಲಿ ಇರುವವರ ಮನೆ ಸಂಖ್ಯೆಗೆ ತೆರಿಗೆ ಆಕರ ಮಾಡದೆ, ಈ ಮನೆ ಸಂಖ್ಯೆಗಳ ಮಾಹಿತಿಯನ್ನು ಫ್ರೀಜ್ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶಕ್ಕೆ ತಾಲೂಕಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಂಗಳವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಇಲ್ಲಿಯ ಇಸಳೂರು ಗ್ರಾಮ ಪಂಚಾಯಿತಿ ಎದುರಿನ ಪ್ರತಿಭಟನೆ ನಡೆದು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.

ಈ ವೇಳೆ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿಂದಿನ ಸರ್ಕಾರದಲ್ಲಿ ಈಶ್ವರ ಖಂಡ್ರೆ ಅರಣ್ಯ ಸಚಿವರಾಗಿ ಅತಿಕ್ರಮಣ ಜಾಗದಲ್ಲಿ ವಾಸಿಸುವವರ ಮನೆ ಕೀಳಿಸುವ ಬಗ್ಗೆ ಆಸಕ್ತಿ ತೋರಿದ್ದರೆ ಈ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಾಗಿ ಮತ್ತೆ ತಮ್ಮ ಹಿಂದಿನ ಚಾಳಿ ಮುಂದುವರಿಸಿದ್ದಾರೆ. ಸರ್ಕಾರ ಇಂತಹ ನಿರ್ಧಾರಗಳಿಂದ ಬಡವರ ಬದುಕು ಬೀದಿಗೆ ಬರಲಿದೆ ಎಂದು ಆಕ್ರೋಶ ಹೊರ ಹಾಕಿದರು.

ಸರ್ಕಾರ ಈ ಆದೇಶವನ್ನು ಹಿಂಪಡೆಯಲೇಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ತೀವ್ರತೆ ಪಡೆಯುತ್ತಲೇ ಸಾಗುತ್ತದೆ. ಸರ್ಕಾರದ ಆದೇಶ ಎಂದು ಗ್ರಾಮ ಪಂಚಾಯಿತಿಯಿಂದ ಅರಣ್ಯ ಅಥವಾ ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವವರಿಗೆ ಗ್ರಾಮ ಪಂಚಾಯಿತಿ ನೋಟಿಸ್ ನೀಡಿದ್ದೇ ಆದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಇಲ್ಲಿಯವರೆಗೆ ಪಂಚಾಯಿತಿಯ ಹೊರ ನಿಂತು ಪ್ರತಿಭಟನೆ ನಡೆಸಿದ್ದೇವೆ. ಒಂದೊಮ್ಮೆ ಗ್ರಾಮ ಪಂಚಾಯಿತಿ ನೋಟಿಸ್ ನೀಡಿದ್ದೇ ಆದರೆ ನಾವು ಗ್ರಾಮ ಪಂಚಾಯಿತಿಯ ಒಳಗೆ ಬರಬೇಕಾಗುತ್ತದೆ. ನಾವು ಯಾವುದೇ ಕಾರಣಕ್ಕೂ ಸುಮ್ಮನಾಗುವುದಿಲ್ಲ ಎಂದು ಎಚ್ಚರಿಸಿದರು.

ಇ-ಸ್ವತ್ತಿನ ಹೆಸರಿನಲ್ಲೇ ಸರ್ಕಾರ ನಮಗೆ ಕಿರುಕುಳ ಕೊಡುತ್ತಿದೆ. ಇ-ಸ್ವತ್ತು ಸಮಸ್ಯೆ ಬಗೆಹರಿಯಿತು ಎಂದು ಬ್ಯಾನರ್ ಹಾಕಿದವರು ಏನು ಮಾಡ್ತಿದ್ದಾರೆ? ಈಗ ಬಡವರು ಮನೆ ಕಳೆದುಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ಇನ್ನೊಂದೆಡೆ ಕಸ್ತೂರಿ ರಂಗನ್ ವರದಿ ಜಾರಿಯ ಭೂತ ಕಾಡುತ್ತಿದೆ. ಜಿಲ್ಲೆಯ ಜನತೆ ಪರಿಸರ ಬಗ್ಗೆ ಸದಾ ಕಾಳಜಿ ಇದ್ದವರು, ಪರಿಸರ ರಕ್ಷಿಸಿಕೊಂಡೇ ಜೀವನ ನಡೆಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯಲ್ಲಿ ಆಕಾಶದಿಂದ ನಡೆಸಿದ ಸರ್ವೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರತಿ ಹಳ್ಳಿಗೆ ಆಗಮಿಸಿ ಸರ್ವೇ ನಡೆಸಲಿ, ಸ್ಥಳ ಸಮೀಕ್ಷೆ ಮಾಡಲಿ. ಅರಣ್ಯದ ಹೆಸರಿನಲ್ಲಿ ನಮಗೆ ತೊಂದರೆ ನೀಡುವ ಕಾರ್ಯ ನಡೆಯುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.

ನಮ್ಮ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ನವೀನ ಶೆಟ್ಟಿ ಮಾತನಾಡಿ, ನಮ್ಮ ಮನೆ ನಂಬರ್ ಉಳಿಸುಕೊಳ್ಳುವ ಅನಿವಾರ್ಯತೆ ಇದೆ. ನಾವು ಅನೇಕ ವರ್ಷದಿಂದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಸರ್ಕಾರಿ ಭುಮಿ ಮತ್ತು ಅರಣ್ಯ ಭೂಮಿ ಮನೆಗಳಿಗೆ ತೆರಿಗೆ ಕೈ ಬಿಡುವ ಕುರಿತು ಸರ್ಕಾರ ಏಕಾಏಕಿ ಹೊರಡಿಸಿದ ಮಾರ್ಗಸೂಚಿ ಇದಲ್ಲ. ವ್ಯವಸ್ಥಿತವಾಗಿಯೇ ಬಡವರನ್ನು ಒಕ್ಕಲೆಬ್ಬಿಸಿ, ಪಂಚಾಯಿತಿ ಆಕ್ಟ್ ಮೂಲಕ ನೀಡಿದ ಹಕ್ಕುಗಳನ್ನು ಕಿತ್ತುಕೊಳ್ಳಹೊರಟಿದೆ. ಛತ್ತಿಸಗಡ, ಮಧ್ಯಪ್ರದೇಶದಲ್ಲಿ ಅರಣ್ಯ ಗ್ರಾಮಗಳನ್ನು ಕಂದಾಯ ಗ್ರಾಮ ಮಾಡಿದ್ದಾರೆ. ನಮ್ಮಲ್ಲಿ ಮಾತ್ರ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಗ್ರಾಮೀಣ ಘಟಕ ಅಧ್ಯಕ್ಷೆ ಉಷಾ ಹೆಗಡೆ, ನಿರ್ಮಲಾ ಶೆಟ್ಟಿ, ಮಂಜುನಾಥ ಭಂಡಾರಿ, ಚಂದ್ರು ದೇವಾಡಿಗ, ಗುರುಪ್ರಸಾದ ಹೆಗಡೆ, ಪ್ರಸನ್ನ ಹೆಗಡೆ, ಆನಂದ ಸಾಲೇರ ಇತರರಿದ್ದರು. ಇದಕ್ಕೂ ಮುನ್ನ ಕಾಗೇರಿಯವರ ನೇತೃತ್ವದಲ್ಲಿ ಬೃಹತ್ ರ‌್ಯಾಲಿ ನಡೆಸಲಾಯಿತು.