ಕಾರವಾರ: ಬಿಜೆಪಿ-ಜೆಡಿಎಸ್ ಎನ್ಡಿಎ ಸರ್ಕಾರದ ಭಾಗ. ಆದರೆ, ಕಾರವಾರದಲ್ಲಿ ಮಿತ್ರ ಪಕ್ಷಗಳ ನಡುವೆ ಕುಸ್ತಿ ಶುರುವಾಗಿದೆ. ತಾನೇ ಮಿತ್ರ ಪಕ್ಷದ ಅಭ್ಯರ್ಥಿ ಎಂದು ಆನಂದ ಅಸ್ನೋಟಿಕರ್ ಘೋಷಿಸಿದ್ದಾರೆ. ಮಾತ್ರವಲ್ಲ ಮಿತ್ರ ಪಕ್ಷದ ಮಾಜಿ ಶಾಸಕಿ ರೂಪಾಲಿ ನಾಯ್ಕ ವಿರುದ್ಧವೂ ಮಾತನಾಡಿದ್ದಾರೆ. ಇದು ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾಜಿ ಸಚಿವ ಜೆಡಿಎಸ್ ನಾಯಕ ಆನಂದ ಅಸ್ನೋಟಿಕರ್ ಘೋಷಿಸಿದರು.
ಕಾರವಾರ ಅಂಕೋಲಾ ತಾಲೂಕಿನ ಜೆಡಿಎಸ್ ಪದಾಽಕಾರಿಗಳ ಪಟ್ಟಿ ಬಿಡುಗಡೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಭಾನುವಾರ ಅವರು ಮಾತನಾಡಿದರು. ನಾನು ಈ ಹಿಂದೆ ಹಲವು ಚುನಾವಣೆ ಎದುರಿಸಿದ್ದರೂ ವೈಯಕ್ತಿಕ ಶಕ್ತಿಯಿಂದ ಸ್ಪರ್ಧಿಸಿದ್ದ. ಇದೇ ಮೊದಲ ಬಾರಿಗೆ ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ಜನವರಿ ಹೊತ್ತಿಗೆ ಎಲ್ಲ ಬೂತ್ ಕಮಿಟಿಗಳು, ವಿವಿಧ ಸಮಾಜಗಳ ಕಮಿಟಿಗಳು, ವಿವಿಧ ಮೋರ್ಚಾಗಳ ಕಮಿಟಿ ರಚಿಸಲಿದ್ದೇವೆ. ನವೆಂಬರ್ 3 ರಂದು ಬೆಳಗ್ಗೆ 10.30 ಕ್ಕೆ ಅಂಕೋಲಾ ಬ್ಲಾಕ್ ಕಚೇರಿಯನ್ನು ಉದ್ಘಾಟಿಸಲಾಗುವುದು. ರಾಜ್ಯ ಮಹಿಳಾ ಜೆಡಿಎಸ್ ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸುವರು. ನಂತರ ಕಾರ್ಯಕರ್ತರ ಸಮಾವೇಶ ಅಂಕೋಲಾದಲ್ಲಿ ಮಧ್ಯಾಹ್ನ ಕಾರವಾರದಲ್ಲಿ 3.30 ಕ್ಕೆ ಸಮಾವೇಶ ನಡೆಯಲಿದೆ ಎಂದರು.
ನನ್ನ ಡಿಎನ್ಎದಲ್ಲಿ ಹಿಂದುತ್ವದ ರಕ್ತ ಹರಿಯುತ್ತಿದೆ. ಇದರಿಂದ ನಾನು ಮತ್ತೆ ಕಾಂಗ್ರೆಸ್ಗೆ ಹೋಗುವ ಇಚ್ಛೆ ಇಲ್ಲ ಎಂದ ಅಸ್ನೋಟಿಕರ್. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಅದರಲ್ಲಿ ಕಾರವಾರ ಕ್ಷೇತ್ರವೂ ಮಹತ್ವದ್ದಾಗಲಿದೆ ಎಂದರು. ಕಾರವಾರ ಕ್ಷೇತ್ರ ಹಿಂದುಳಿದಿದೆ. ಇದು ಗಡಿ ಪ್ರದೇಶ ಇದು ಅಭಿವೃದ್ಧಿಯಾಗಬೇಕು ಎಂಬುದು ಮಾತ್ರ ನನ್ನ ಉದ್ದೇಶವಾಗಿದೆ ಎಂದರು.
ಮೋಹಿನಿ ನಾಯ್ಕ ಅವರು ಮಹಿಳಾ ಜೆಡಿಎಸ್ ರಾಜ್ಯ ಪದಾಧಿಕಾರಿಯಾಗಿದ್ದು, ಮೊಂಗು ಗೌಡ ರಾಜ್ಯ ಕಮಿಟಿಯ ಸದಸ್ಯರಾಗಿದ್ದಾರೆ. ಪೂರ್ಣಿಮಾ ಮಾಹೇಕರ್ ಜಿಲ್ಲಾ ಜೆಡಿಎಸ್ ಸಮಿತಿಯ ಸದಸ್ಯರಾಗಿದ್ದಾರೆ. ಕಾರವಾರ ಬ್ಲಾಕ್ ಜೆಡಿಎಸ್ ಅಧ್ಯಕ್ಷರಾಗಿ ಉದಯ ಕಳಸ, ಅಂಕೋಲಾ ಬ್ಲಾಕ್ ಜೆಡಿಎಸ್ ಅಧ್ಯಕ್ಷರಾಗಿ ಕರಿಯಾ ಗೌಡ ಅವರನ್ನು ನೇಮಿಸಲಾಗಿದೆ ಎಂದು ಆನಂದ ಅಸ್ನೋಟಿಕರ್ ತಿಳಿಸಿದರು.
ಪಕ್ಷದ ಪ್ರಮುಖರಾದ ವಿಜು ಕಾಂಬಳೆ, ಮಿತುನ್ ರೇವಣಕರ್, ಆನಂದು ದಾಮ್ಸಡೆಕರ್, ನಿತಿನ್ ಸಾವಂತ, ಮದನ ಗುನಗಿ, ಕೃಷ್ಣಾ ತಾಂಡೇಲ, ಸುನೀಲ ಕಡವಾಡಕರ್, ಉದಯ ನಾಯ್ಕ, ಸ್ನೇಹಾ, ರುಕ್ಮಿಣಿ ಗೌಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಬಿಜೆಪಿಯಿಂದ ಶಾಸಕಿಯಾಗಿದ್ದ ರೂಪಾಲಿ ನಾಯ್ಕ ಅವರ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯಿತು. ಕ್ರಿಮ್ಸ್ ಆಸ್ಪತ್ರೆ ಕಟ್ಟಡ ಕಾಮಗಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಖಾರ್ಲ್ಯಾಂಡ್ ಒಡ್ಡುಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು. ಇದರಿಂದ ನಾನು ಆಗ ನಾನು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದೆ. ತಾಯಿಯವರ ಆರೋಗ್ಯ ಸರಿಯಾಗಿಲ್ಲದ ಕಾರಣ ನಾನು ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿಲ್ಲ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆನಂದ ಅಸ್ನೋಟಿಕರ್, ಮಾಜಿ ಶಾಸಕಿ ರೂಪಾಲಿ ಅವರನ್ನು ಸಂಬೋಽಸಿ ಬಿಜೆಪಿ ಅವರಪ್ಪನದಲ್ಲ. ಅಥವಾ ಜೆಡಿಎಸ್ ನಮ್ಮಪ್ಪನದಲ್ಲ. ಪಕ್ಷಕ್ಕಾಗಿ ನಾನು ಕಾರ್ಯನಿರ್ವಹಿಸುತ್ತೇನೆ. ರಾಷ್ಟಿçÃಯ ನಾಯಕರು ಮಾಡಿದ ನಿರ್ಧಾರಗಳಿಗೆ ನಾನು ಬದ್ಧನಾಗಿರುತ್ತೇನೆ ಎಂದರು.
ಹಾಲಿ ಶಾಸಕ ಸತೀಶ ಸೈಲ್ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಆನಂದ ಅಸ್ನೋಟಿಕರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಾರವಾರಕ್ಕೆ ಸರ್ಕಾರ ಘೋಷಿಸಿರುವುದು ಸಂತಸದ ಸಂಗತಿ. ಆದರೆ, ಅದು ಕೇವಲ ಹಾಲಿ ಶಾಸಕರಿಂದ ಮಾತ್ರ ಆಗಿದ್ದಲ್ಲ. ಎಲ್ಲರ ಪ್ರಯತ್ನವಿದೆ ಎಂದರು.
ಹಾಲಿ ಶಾಸಕ ಸತೀಶ ಸೈಲ್ ಬೆಳಗ್ಗೆ ಏಳುವುದೇ 12 ಗಂಟೆಗೆ. ನನ್ನ ಕರೆಯನ್ನೂ ಸ್ವೀಕರಿಸುವುದಿಲ್ಲ. ಅವರ ಕಾರ್ಯದರ್ಶಿಗೆ ಕರೆ ಮಾಡಿ ನಮ್ಮ ಕಾರ್ಯಕರ್ತರ ಕೆಲಸ ಮಾಡಿಸಿಕೊಳ್ಳುತ್ತಿದ್ದೇನೆ. ಇನ್ನೂ ಅವರ ಸಂಪರ್ಕದಲ್ಲಿದ್ದೇನೆ ಎಂದರು.