ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಬಳಿ ಸೇತುವೆ ಕುಸಿದ ಸ್ಥಳಕ್ಕೆ ಸಿದ್ದಾಪುರ ಜಿಪಂ ಉಪವಿಭಾಗದ ಎಇಇ ಬಸವರಾಜ ಸಿ ಹಾಗೂ ಇಂಜಿನಿಯರ್ ಗಣೇಶ ಹೆಗಡೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ನರಹರಿ ಹೆಗಡೆ ಕರ್ಕಿಸವಲ್ ಇದ್ದರು.
- ತಡೆಗೋಡೆ ನಿರ್ಮಾಣಕ್ಕೆ 95 ಲಕ್ಷ ರೂ. ಅಂದಾಜು ಪತ್ರಿಕೆ ತಯಾರಿ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕರ್ಕಿಸವಲ್ ಬಳಿ ಸೇತುವೆ ಕುಸಿದ ಸ್ಥಳಕ್ಕೆ ಸಿದ್ದಾಪುರ ಜಿಪಂ ಇಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿ ತಡೆಗೋಡೆ ನಿರ್ಮಾಣಕ್ಕೆ 95 ಲಕ್ಷ ರೂ.ಗಳು ಬೇಕಾಗಬಹುದು ಎಂದು ಅಂದಾಜು ಪತ್ರಿಕೆ ತಯಾರಿಸಿದ್ದಾರೆ.
‘ಕರ್ಕಿಸವಲ್ ಬಳಿ ಸೇತುವೆ ಕುಸಿತ’ ಕುರಿತು ‘ವಿಜಯವಾಣಿ’ಯಲ್ಲಿ ಬುಧವಾರ ವರದಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದಿಸಿದ ಸಿದ್ದಾಪುರ ಜಿಪಂ ಉಪವಿಭಾಗದ ಎಇಇ ಬಸವರಾಜ ಸಿ. ಹಾಗೂ ಇಂಜಿನಿಯರ್ ಗಣೇಶ ಹೆಗಡೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಈಗ ಮಳೆಗಾಲವಾಗಿದ್ದರಿಂದ ಕಾಮಗಾರಿ ನಡೆಸುವುದು ಕಷ್ಟ. ಈ ಸ್ಥಳದಲ್ಲಿ ಭಾರಿ ವಾಹನ (ಸಾರಿಗೆ ಬಸ್) ಸಂಚಾರ ಮಾಡುವುದು ಕಷ್ಟ. ಆದರೆ, ಲಘುವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಇಲ್ಲಿಯ ರಸ್ತೆಯ ಕುರಿತು ಈಗಾಗಲೇ ಶಾಸಕ ಭೀಮಣ್ಣ ನಾಯ್ಕ ಅವರ ಗಮನಕ್ಕೆ ಹಾಗೂ ತಹಸೀಲ್ದಾರ್ ಗಮನಕ್ಕೂ ತರಲಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುವ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರ ಅನುಲಕೂಲಕ್ಕಾಗಿ ಮಿನಿ ಬಸ್ ಸಂಚಾರ ಮಾಡಬಹುದು. ಸಂಬಂಧಪಟ್ಟ ಸಾರಿಗೆ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ತಹಸೀಲ್ದಾರ್ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೆ, ಹೊನ್ನೆಹದ್ದ ಕ್ರಾಸ್‌ನಿಂದ ಮಟ್ಟೆಮನೆಯವರೆಗಿನ ರಸ್ತೆ ದುರಸ್ತಿ ಮಾಡುವುದಕ್ಕೂ 65 ಲಕ್ಷ ರೂ.ಗಳ ಕ್ರಿಯಾಯೋಜನೆ ಮಾಡಲಾಗಿದೆ ಎಂದು ಎಇಇ ಬಸವರಾಜ ಸಿ. ಅವರು ತಿಳಿಸಿದ್ದಾರೆ.