ಮುಂಡಗೋಡ ಓಂಶಾಂತಿ ಭವನ ಉದ್ಘಾಟನೆ ಸಮಾರಂಭದ ಸಭಾ ಕಾರ್ಯಕ್ರಮವನ್ನು ರಾಜಯೋಗಿನಿ ಬ್ರಹ್ಮಕುಮಾರಿ ಅಲಕಾ ದೀದಿಜಿ ಉದ್ಘಾಟಿಸಿದರು. ಬ್ರಹ್ಮಕುಮಾರಿ ನಿರ್ಮಲಾ, ಜಯಂತಿ ಜೀ, ಇತರರಿದ್ದರು.
ಮುಂಡಗೋಡ: ಎಲ್ಲರ ಜೀವನದಲ್ಲಿ ಸುಖ, ಶಾಂತಿ ನೆಲೆಸಲು ಸಂಘಟನೆ ಮತ್ತು ಮಂದಿರ ಸ್ಥಾಪನೆ ಮಾಡಿದ್ದೇವೆ ಎಂದು ಮುಂಬಯಿ ಈವಿವಿ ಕಲ್ಯಾಣ ಉಪವಲಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಅಲಕಾ ದೀದಿಜಿ ಹೇಳಿದರು.
ಪಟ್ಟಣದ ಶ್ರೀ ಮಹಾಗಣಪತಿ ಮಂದಿರದ ಕಲ್ಯಾಣ ಮಂಟಪದಲ್ಲಿ ಸೋಮವಾರ ಈಶ್ವರೀಯ ವಿಶ್ವ ವಿದ್ಯಾಲಯದ ನೂತನ ಓಂಶಾಂತಿ ಭವನದ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಈಶ್ವರೀಯ ಸಂದೇಶ ನೀಡಿದರು.
ಪರಮಾತ್ಮನ ಸೇವೆ ಮತ್ತು ಎಲ್ಲರ ಸೇವೆಗಾಗಿ ದೇವಸ್ಥಾನ ನಿರ್ಮಾಣವಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ನಿದ್ದೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಸೇವಾ ಕೇಂದ್ರಕ್ಕೆ ಬಂದು ಸಮಯವನ್ನು ವ್ಯರ್ಥ ಮಾಡದೆ ಯೋಗ ತರಬೇತಿ ಪಡೆದು ಸುಖ ನಿದ್ರೆ ಮಾಡಿರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರಿ ನಿರ್ಮಲಾ ಮಾತನಾಡಿ, ಭಾರತೀಯ ಹಿರಿಮೆ-ಗರಿಮೆ ನಮ್ಮೆಲ್ಲರನ್ನೂ ಆಧ್ಯಾತ್ಮಿಕ ಜೀವನದತ್ತ ಕರೆದೊಯ್ಯುತ್ತದೆ. ಎಲ್ಲರ ಆತ್ಮದಲ್ಲಿ ಜ್ಯೋತಿ ಬೆಳಗಲಿ. ಮಾನವ ಮಾನವನಾಗಿ ಹೇಗೆ ಬಾಳಬೇಕು, ಮಾನವೀಯ ಮೌಲ್ಯ, ನೈತಿಕ, ಸಾಮಾಜಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಎಂಬುವುದನ್ನು ಈಶ್ವರೀಯ ವಿಶ್ವ ವಿದ್ಯಾಲಯ ತೋರಿಸಿ ಕೊಡುತ್ತದೆ ಎಂದರು.
ಗದಗ ಈವಿವಿ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಜೀ ಈಶ್ವರೀಯ ಸಂದೇಶ ನೀಡುತ್ತಾ, ದೇಶದಲ್ಲಿ ಸಂಸ್ಕಾರ ನೀಡುವುದೆ ಶಿಕ್ಷಣ. ನಮ್ಮ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತದೆ. ಸುಖ ಶಾಂತಿ ನೆಮ್ಮದಿ ನೀಡುವ ಹಾಗೂ ಮನಸಿಗೆ ಶಾಂತಿ ನೀಡುವ ಭವನವಾಗಿದೆ ಎಂದರು.
ಇದಕ್ಕೂ ಮುನ್ನ ಮಹಾಗಣಪತಿ ದೇವಸ್ಥಾನದಿಂದ ಶಾಂತಿ ಯಾತ್ರೆ ಆರಂಭಿಸಿ ನಂದೀಶ್ವರ ನಗರದಲ್ಲಿರುವ ಓಂಶಾಂತಿ ಭವನ ಉದ್ಘಾಟಿಸಿದರು. ನಂತರ ಮರಳಿ ಯಾತ್ರೆ ಸಭಾ ಕಾರ್ಯಕ್ರಮದ ವೇದಿಕೆ ತಲುಪಿತು. ತಾಲೂಕು ಸಂಚಾಲಕಿ ಬಿ.ಕೆ. ಗಂಗಾಂಬಿಕೆ, ವಿಜಯ, ಶೈಲಾ, ಗೀತಾ, ಶಿವಾನಂದ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಈಶ್ವರಿಯರಿದ್ದರು.
ಭಾರತಿ ಗೋಕರ್ಣ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಬ್ರಹ್ಮಕುಮಾರಿ ಸರೋಜಿನಿ ಹಾಗೂ ಚಂದ್ರಕಾಂತ ಶಿವಗೀತೆ ಪ್ರಸ್ತುತಪಡಿಸಿದರು.