ಯಲ್ಲಾಪುರ ಪಟ್ಟಣದಲ್ಲಿ ಫೆ. 11ರಿಂದ 19ರವರೆಗೆ ಜರುಲಿರುವ ಗ್ರಾಮದೇವಿ ಜಾತ್ರೆಗಾಗಿ ಭರದಿಂದ ಸಿದ್ಧತೆಗಳು ನಡೆದಿವೆ.
- ಯಲ್ಲಾಪುರದಲ್ಲಿ ಫೆ. 11ರಿಂದ 19ರವರೆಗೆ ಗ್ರಾಮದೇವಿ ಜಾತ್ರೆ
ಯಲ್ಲಾಪುರ: ಪಟ್ಟಣದಲ್ಲಿ ಫೆ. 11ರಿಂದ 19ರವರೆಗೆ ಜರುಲಿರುವ ಗ್ರಾಮದೇವಿ ಜಾತ್ರೆಗಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಪಟ್ಟಣದ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ ಮುಗಿದಿದ್ದು, ಜಾತ್ರೆಗಾಗಿ ಬ್ಯಾನರ್, ಬಂಟಿಂಗ್ಸ್ ಅಳವಡಿಸಲಾಗುತ್ತಿದೆ.
ಪಟ್ಟಣದಲ್ಲಿ ಬೀದಿದೀಪಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ದೇವಿ ಮೈದಾನದಲ್ಲಿ ಜಾತ್ರಾ ಮಂಟಪದ ಸಿದ್ಧತೆ ಭರದಿಂದ ಸಾಗಿದೆ. ಜಾತ್ರೆ ಮಂಟಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದು, ಈ ಪ್ರಯುಕ್ತ ರಸ್ತೆಯ ಎರಡು ಬದಿಗಳಲ್ಲಿ ಅಂಗಡಿ ಮುಂಗಟ್ಟುಗಳು ಇರುವುದರಿಂದ ಜನದಟ್ಟಣೆಯಾಗಿ ವಾಹನ ಸಂಚಾರಕ್ಕೆ ಅನನುಕೂಲವಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ 52ರ ಪಟ್ಟಣದ ಸಬಗೇರಿಯ ಶಿವಾಜಿ ಗಾರ್ಡನ್ ಕ್ರಾಸ್‌ನಿಂದ ಸಂಭ್ರಮ ಹೋಟೇಲ್ ಕ್ರಾಸ್‌ವರೆಗೆ ಫೆ. 10ರಂದು ರಾತ್ರಿ 12 ಗಂಟೆಯಿಂದ ಫೆ. 20ರ ರಾತ್ರಿ 12ರವರೆಗೆ ವಾಹನ ಸಂಚಾರ ನಿಷೇಧಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಫೆ. 15ರಂದು ನಡೆಯುವ ವಾರದ ಸಂತೆಯನ್ನು ಬೆಲ್ ರಸ್ತೆಯ ಬದಲಾಗಿ, ಕೃಷಿ ಇಲಾಖೆ ಕಚೇರಿ ಎದುರಿನಿಂದ ಶಿವಾಜಿ ಗಾರ್ಡನ್‌ವರೆಗೆ ಹೆದ್ದಾರಿಯಲ್ಲಿ ನಡೆಸಲು ಸೂಚಿಸಲಾಗಿದೆ. ಬದಲಿ ಸಂಚಾರ ಮಾರ್ಗವಾಗಿ ಸಂಕಲ್ಪ ಕ್ರಾಸ್‌ನಿಂದ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ ಸರ್ಕಲ್ ಮುಖಾಂತರ ಸಂಭ್ರಮ ಕ್ರಾಸ್‌ನಿಂದ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಹಾಗೂ ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗುವ ಲಘು ವಾಹನಗಳು ತಟಗಾರ ಕ್ರಾಸ್-ನಿಸರ್ಗಮನೆ-ಗೇರಕೊಂಬೆ ಚೆಕ್‌ಪೋಸ್ಟ್-ಬಿಸಗೋಡ ಕ್ರಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗುವ ಭಾರಿ ವಾಹನಗಳು ಇಡಗುಂದಿಯ ಭಾರಿ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಹಾಗೂ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಸಾಗುವ ಭಾರಿ ವಾಹನಗಳು ಹಿಟ್ಟಿನಬೈಲ್ ಭಾರಿ ವಾಹನ ಪಾರ್ಕಿಂಗ ಸ್ಥಳದಲ್ಲಿ ಪ್ರತಿ ದಿನ ಸಂಜೆ 4 ಗಂಟೆಯಿಂದ ರಾತ್ರಿ 12ರವರೆಗೆ ನಿಲ್ಲಿಸಲು ಸೂಚಿಸಲಾಗಿದೆ.
ಜಾತ್ರೆ ಅವಧಿಯಲ್ಲಿ ಬೀಸಗೋಡ ಕ್ರಾಸ್-ಸಂಭ್ರಮ ಕ್ರಾಸ್-ಅಂಬೇಡ್ಕರ್ ಸರ್ಕಲ್-ಬೆಲ್ ರಸ್ತೆ-ಸಂಕಲ್ಪ ಕ್ರಾಸ್-ತಟಗಾರ ಕ್ರಾಸ್‌ವರೆಗಿನ ಎರಡು ಬದಿಯ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.