ಕರ್ಕಿ ಪ್ರಭಾಕರ ಭಂಡಾರಿ  
ಉತ್ತರ ಕನ್ನಡ

ಯಕ್ಷಗಾನ ಮದ್ದಲೆ ವಾದಕ ಕರ್ಕಿ ಪ್ರಭಾಕರ ಭಂಡಾರಿ ಇನ್ನಿಲ್ಲ

ಹೊನ್ನಾವರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಮದ್ದಲೆ ವಾದಕ ಹೊನ್ನಾವರ ತಾಲೂಕಿನ ಕರ್ಕಿಯ ಪ್ರಭಾಕರ ಭಂಡಾರಿ (84) ಶನಿವಾರ ನಿಧನರಾಗಿದ್ದಾರೆ. ಪ್ರಸಿದ್ದ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಮದ್ದಳೆ ವಾದಕರಾಗಿದ್ದ ಅವರು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಖ್ಯಾತ ಕಲಾವಿದರನ್ನು ಕುಣಿಸಿದ್ದಾರೆ. ಅವರಿಗೆ ಪತ್ನಿ, ಮೂರು ಪುತ್ರರು, ಒಬ್ಬ ಪುತ್ರಿ ಹಾಗೂ ಬಂಧು ಬಳಗ ಇದ್ದಾರೆ.
ಕರ್ಕಿಯಲ್ಲಿ ಯಕ್ಷಗಾನ ಕಲಾ ಕುಟುಂಬದಲ್ಲಿ ಜನಿಸಿ ಯಕ್ಷಗಾನದ ಮದ್ದಳೆಯ ಸೆಳೆತಕ್ಕೆ ಒಳಗಾಗಿ 5ನೇ ತರಗತಿಯಲ್ಲಿಯೇ ಶಾಲೆ ಬಿಟ್ಟು ಯಕ್ಷಗಾನ ರಂಗಕ್ಕೆ ಸೇರಿದ್ದರು. ಗುಂಡಬಾಳ, ಕೊಳಗಿಬೀಸ್, ಅಮೃತೇಶ್ವರೀ, ಕರ್ಕಿ, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ಮದ್ದಳೆ ವಾದಕರಾಗಿ ಸೇವೆ ಸಲ್ಲಿಸಿದ್ದರು. ಸನ್ನಿವೇಶಕ್ಕೆ ತಕ್ಕಂತೆ ಹೊರಳಿಕೆಗಳ ಮಿಳಿತದೊಂದಿಗೆ ಮೃದು, ಮಧ್ಯಮ, ಅಬ್ಬರ ವಾದನದ ರಂಗ ಸೂಕ್ಷ್ಮತೆ ಹೊಂದಿದ್ದ ಪ್ರಭಾಕರ ಭಂಡಾರಿ ಮದ್ದಳೆ ವಾದನದಲ್ಲಿ ಸ್ವರ ಹೊರಹೊಮ್ಮಿಸುವ ಕೌಶಲ ಹೊಂದಿದವರಾಗಿದ್ದರು. ಚಂಡೆ ಮದ್ದಳೆ, ತಬಲಾ ಮೊದಲಾದ ಚರ್ಮವಾದ್ಯಗಳ ತಯಾರಿಕೆಯಲ್ಲಿಯೂ ಪರಿಣತಿ ಹೊಂದಿದ್ದರು.
ಗಣಪತಿ ಮೂರ್ತಿ ತಯಾರಕ: ಕರ್ಕಿಯ ಭಂಡಾರಿ ಕುಟುಂಬವು ಗಣಪತಿ ಮೂರ್ತಿ ತಯಾರಿಕೆಯಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಗಣಪತಿ ಮೂರ್ತಿ ತಯಾರಿಕೆಯಲ್ಲಿ ಪರಿಣಿತಿಯನ್ನು ಹೊಂದಿರುವ ಪ್ರಭಾಕರ ಭಂಡಾರಿ ಹಾಗೂ ಅವರ ಕುಟುಂಬದವರು ತಯಾರಿಸಿದ ಗಣಪತಿಯು ರಾಜ್ಯದ ವಿವಿಧ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಪ್ರಶಸ್ತಿ: ಪ್ರಭಾಕರ ಭಂಡಾರಿ ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, ಕಾಳಿಂಗ ನಾವುಡ ಪ್ರಶಸ್ತಿ, ಕೆರೆಮನೆ ಮಹಾಬಲ ಹೆಗಡೆ ಪ್ರಶಸ್ತಿ, ಗಜಾನನ ಹೆಗಡೆ ಪ್ರಶಸ್ತಿ, ಪಳ್ಳಿ ಸೋಮನಾಥ ಹೆಗಡೆ ಪ್ರಶಸ್ತಿ, ಕಿದಿಯೂರ ಜನಾರ್ಧನ ಆಚಾರ್ಯ ಪ್ರಶಸ್ತಿ, ಚಂದ್ರಮ್ಮ ಗಣಪಯ್ಯ ಹಂದೆ ಇತರ ಪ್ರಶಸ್ತಿಗಳು ಲಭಿಸಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಇವರ ನಿಧನಕ್ಕೆ ಯಕ್ಷಗಾನ ಕಲಾವಿದರು, ಕಲಾಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.