ಸಿ.ಆರ್‌.ಪಾಟೀಲ್‌  Photographer
ಉತ್ತರ ಕನ್ನಡ

ನದಿ ಜೋಡಣೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು

ಬೇಡ್ತಿ ನದಿ ತಿರುವು ಯೋಜನೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲ್‌ ಲಿಖಿತ ಸ್ಪಷ್ಟನೆ

ಕಾರವಾರ: ಪ್ರಸ್ತಾವಿತ ಬೇಡ್ತಿ-ಹಿರೇವಡ್ಡತ್ತಿ (ಮಾರ್ಪಡಿಸಿದ ಬೇಡ್ತಿ-ವರದಾ) ನದಿ ಜೋಡಣೆ ಯೋಜನೆಯ ಜಾರಿಗೂ ಪೂರ್ವ  ಪರಿಸರ, ಅರಣ್ಯ, ವನ್ಯಜೀವಿ ಹಾಗೂ ಇತರ ಹಾನಿಗಳ ಬಗ್ಗೆ ಪರಿಶೀಲಿಸಲಾಗುವುದು, ಇದರಿಂದಾಗುವ ಪರಿಸರ ಹಾನಿಯ ಬಗೆಗಿನ ಕಾಳಜಿಯನ್ನೂ ಪರಿಗಣಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಸಚಿವರಾದ ಸಿ. ಆರ್. ಪಾಟೀಲ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿದ ಮನವಿಗೆ ಅವರು ಲಿಖಿತ ಪ್ರತಿಕ್ರಿಯೆ ನೀಡಿದ್ದು, ಸಂಸದರ ಕಾರ್ಯಾಲಯ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಯೋಜನೆ  ಕಾರ್ಯಸಾಧುವಲ್ಲ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಇದನ್ನು ಅನುಷ್ಠಾನಗೊಳಿಸಬಾರದು, ಯೋಜನೆಯ ವಿಸ್ತçತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಮುಂದಿನ ಎಲ್ಲಾ ಚಟುವಟಿಕೆಗಳನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಕಾಗೇರಿ ಅವರು ಜುಲೈ 30 ರಂದು ಮನವಿ ಸಲ್ಲಿಸಿದ್ದರು.
ಡಿಪಿಆರ್ ತಯಾರಿಕೆ ಕೇವಲ ಯೋಜನೆಯ ಹಂತವಾಗಿದೆ. ಇದು ಯೋಜನೆ ಜಾರಿಯ ಹಂತವಲ್ಲ ಎಂದು ಸ್ಪಷ್ಟಪಡಿಸಿರುವ ಪಾಟೀಲ ಅವರು ಡಿಪಿಆರ್ ತಯಾರಿಸುವಾಗ ನದಿಯ ಕೆಳಹಂತದ ಪರಿಸರ ವ್ಯವಸ್ಥೆ, ಕೃಷಿ, ಮೀನುಗಾರಿಕೆ, ಅಂತರ್ಜಲ ಹಾಗೂ ಬೇಡ್ತಿ ಜಲಾನಯನ ಪ್ರದೇಶದ ಜನರ ಅಗತ್ಯತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ರಾಜ್ಯ ಸರ್ಕಾರ ಕೋರಿರುವ ಹದಗ, ಹಾವೇರಿ ಪ್ರದೇಶಗಳಲ್ಲಿ ನೀರಿನ ವಾಸ್ತವಿಕ ಅಗತ್ಯದ ಬಗ್ಗೆ ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ, ಅಳೆಯಲಾಗುವುದು ಎಂದು ತಿಳಿಸಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎತ್ತಿರುವ ಪರಿಸರ ಹಾಗೂ ಜನಹಿತದ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲ ಶಾಸನಬದ್ಧ ಅರಣ್ಯ, ವನ್ಯಜೀವಿ ಮತ್ತು ಪರಿಸರ ನಿಯಮಾವಳಿಗಳ ಕುರಿತು ರಾಜ್ಯ ಸರ್ಕಾರ ವರದಿ ನೀಡಿದರೆ ಅದನ್ನು ಕೇಂದ್ರ ಪರಿಸರ ಇಲಾಖೆಯು ಕಡ್ಡಾಯವಾಗಿ ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು

ಯಾವುದೇ ನೀರಾವರಿ ಅಥವಾ ನದಿ ಜೋಡಣೆ ಯೋಜನೆಗಳನ್ನು ರೂಪಿಸುವುದು, ಅವುಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವುದು ಸಂಪೂರ್ಣವಾಗಿ ಆಯಾ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯವಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ನೇರ ಹಸ್ತಕ್ಷೇಪವಾಗಲಿ ಅಥವಾ ಜಾರಿಯ ಹೊಣೆಯಾಗಲಿ ಇರುವುದಿಲ್ಲ. ರಾಜ್ಯ ಸರ್ಕಾರ ಕೋರಿದರೆ ತಾಂತ್ರಿಕ ಸಹಕಾರ ನೀಡಲಾಗುವುದು. ಬೇಸ್ತಿ ಯೋಜನೆಗೆ ಸಂಬಂಧ ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯ ವಿನಂತಿಯಂತೆ 23.12.2025 ರಂದು ಒಪ್ಪಂದ ಮಾಡಿಕೊಂಡು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲುಡಿಎ) ಈ ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದಿದ್ದಾರೆ.