ಗೋಕರ್ಣದ ಅಶೋಕೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ 33ನೆ ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತನಿಷ್ಠರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ದಿವ್ಯ ಸನ್ನಿಧಿಯಲ್ಲಿ ಗುರುವಾರ ನಡೆದ ಧರ್ಮಸಭೆಯಲ್ಲಿ ಶುಕ್ಲ ಯಜುರ್ವೇದ ಪಾರಾಯಣ ನಿರ್ವಹಿಸಿದ ವೇದವಿದ್ವಾಂಸರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. 
ಉತ್ತರ ಕನ್ನಡ

chaturmasya: ಸ್ವಚ್ಛಜಲ, ಶುದ್ಧಗಾಳಿಯಿಂದ ಭುವಿಯೇ ಸ್ವರ್ಗ

ಸೋಮನಾಥ ರೆಡ್ಡಿ

ಪ್ರಮುಖ ಮುಖ್ಯಾಂಶಗಳು

  • ರಾಘವೇಶ್ವರ ಶ್ರೀಗಳಿಂದ ಭೌಮಜಲ ನಿರೂಪಣೆ
  • 33ನೆ ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತ
  • ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಧರ್ಮಸಭೆ
ಗೋಕರ್ಣ: ಸ್ವಚ್ಛವಾದ ನೀರು ಮತ್ತು ಶುದ್ಧವಾದ ಗಾಳಿ ಇರುವಲ್ಲಿ ಸ್ವರ್ಗ ತನಾಗಿಯೇ ಭುವಿಗೆ ಇಳಿದು ಬರುತ್ತದೆ. ವಾಸವಾದಲ್ಲಿ ಇಂತಹ ವಾತಾವರಣದಲ್ಲಿ ವಾಸಿಸಬೇಕು. ಎಲ್ಲಿ ಕಲುಷಿತ ನೀರು, ಅಶುದ್ಧ ಗಾಳಿ ಇರುತ್ತದೆಯೋ ಅಲ್ಲಿ ನರಕ ತಾನಾಗಿಯೇ ನಿರ್ಮಾಣವಾಗುತ್ತದೆ ಎಂದು 33ನೆ ಅನ್ನಬ್ರಹ್ಮ ಚಾತುರ್ಮಾಸ್ಯ (chaturmasya) ವ್ರತನಿಷ್ಠರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಇಲ್ಲಿನ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಗುರುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಗಳು ಭೌಮಜಲದ ನಿರೂಪಣೆ ಮಾಡಿದರು. 

ಮಾಯಾ ನಗರಿಯ ಭ್ರಮೆ ಬಿಡಿ: 

ಇಂದಿನ ಯುವ ಜನಾಂಗದಲ್ಲಿ ಹಳ್ಳಿಯನ್ನು ತೊರೆದು ಪೇಟೆಯತ್ತ ಪ್ರವಾಹವಾಗಿ ವಲಸೆ ಹೋಗುವ ಚಾಳಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಕೂಡ ಹಳ್ಳಿಯ ವರನಿಗಿಂತ ಮಹಾನಗರ ವಾಸಿ ವರನನ್ನು ಆಯ್ಕೆ ಮಾಡುವ ಪ್ರವೃತ್ತಿ ಸಾಮೂಹಿಕ ಸನ್ನಿಯಾಗಿ ಬೆಳೆಯುತ್ತಿದೆ. ಇದರಿಂದ ವಿವಾಹ ಇಚ್ಛಿತ ಗಂಡುಗಳು ಪೇಟೆ ಮತ್ತು ನಗರಗಳನ್ನು ನೆಚ್ಚಿಕೊಂಡಿವೆ. ಆದರೆ ಇವತ್ತಿನ ಮಹಾನಗರಗಳು ಪ್ರಾಣಿ, ಪಕ್ಷಿ, ಮರ ಗಿಡಗಳಿಲ್ಲದ ಪ್ರಕೃತಿಯ ಕುರುಹು ಕಾಣಸಿಗದ ಜನ ದಟ್ಟಣೆಯ ರಾಸಾಯನಿಕ ಪ್ರಯೋಗ ತಾಣಗಳಾಗಿವೆ. ಘೋರ ಮಾಲಿನ್ಯ ಪ್ರವಾಹದ ದುರ್ಗಂಧದ ಮಧ್ಯದ ಬದುಕೇ ಇಂದು ಮಹಾನಗರ ಎನಿಸಿಕೊಂಡಿದೆ. ಬಾವಿ, ಕೆರೆ,ನದಿಗಳಿಗೆ ಅವಕಾಶ ಇರದ ರಾಸಾಯನಿಕ ತ್ಯಾಜ್ಯಭರಿತ ನಗರಗಳಲ್ಲಿ ಕಲುಷಿತ ನೀರನ್ನು ಕುಡಿಯಲೇಬೇಕಾದ ದುರವಸ್ಥೆಯಿದೆ. ರಾಸಾಯನಿಕ ಮಿಶ್ರಿತ ಗಾಳಿಯನ್ನೇ ಸೇವಿಸಬೇಕಾದ ಅನಿವಾರ್ಯತೆಯೇ ಆಧುನಿಕ ವ್ಯವಸ್ಥೆ ಎನಿಸಿಕೊಂಡಿದೆ. ಇನ್ನು ನದಿಗಳಿದ್ದರೆ ಅದನ್ನೂ ಮಲಿನವಾಗಿಸಲಾಗಿದೆ ಎನ್ನುವುದಕ್ಕೆ ಬೆಂಗಳೂರು ಬಳಿಯ ವೃಷಭಾವತಿ ನದಿ ಸಾಕ್ಷಿ. ಇಂದಿನ ವೈಜ್ಞಾನಿಕ ವರದಿಗಳು ನದಿಗಳ ನೀರು ಪಾನ ಯೋಗ್ಯವಲ್ಲ. ಅವುಗಳನ್ನು ಬಾಯಿಗೆ ಹಾಕಬೇಡಿ, ಸ್ನಾನಕ್ಕೂ ಬಳಸದಿರಿ ಎಂದು ಎಚ್ಚರಿಸುತ್ತವೆ. ಇನ್ನು ಇಂತಹ ನದಿಗಳನ್ನು ಶುದ್ಧೀಕರಣ ಮಾಡುವ ಯೋಜನೆಗಾಗಿ ಮತ್ತೊಂದಿಷ್ಟು ರಾಸಾಯನಿಕಗಳನ್ನು ತಂದು ಅವಕ್ಕೆ ಸುರಿದು ಪ್ರಯೋಗಕ್ಕೆ ಮುಂದಾಗಲಾಗುತ್ತಿದೆ. ಈ ಎಲ್ಲ ಹಿನ್ನೆಲೆಗಳಿಂದ ಮಹಾನಗರಗಳೆಂಬ ಮಾಯನಗರಿಯ ಭ್ರಮೆ ಮತ್ತು ವ್ಯಾಮೋಹವನ್ನು ಬಿಟ್ಟು ಶುದ್ಧ ನೀರು ಮತ್ತು ಗಾಳಿ ಇರುವ ಹಳ್ಳಿಯಲ್ಲಿ ಬದುಕು ಕಟ್ಟುವ ಪ್ರಯತ್ನ ಯುವ ಜನಾಂಗದಿಂದ ಆಗಲಿ ಎಂದು ಶ್ರೀಗಳು ವಿವರಿಸಿದರು.

ಭೌಮ ಜಲವೇ ಅನಿವಾರ್ಯ: 

ಆಯುರ್ವೇದ ಆಚಾರ್ಯರಾದ ಸುಶ್ರುತರು ಮೊದಲು ಅತ್ಯಂತ ಪರಿಶುದ್ಧವಾದ ಮಳೆಯಿಂದ ಬರುವ ಆಕಾಶಗಂಗಾ ಜಲವನ್ನು ಸಂಗ್ರಹಿಸಿ ಕುಡಿಯುವ ಪ್ರಯತ್ನ ಮಾಡಬೇಕು. ಅದು ಅಸಾಧ್ಯವಾದರೆ ಭೌಮಜಲ ಅಂದರೆ ಭೂಮಿಯಲ್ಲಿ ಲಭ್ಯ ಶುದ್ಧ ನೀರನ್ನು ಸೇವಿಸಬೇಕು ಎಂದು ಭೌಮಜಲದ ಸಪ್ತ ವಿಧಗಳನ್ನು ಉಲ್ಲೇಖಿಸಿದ್ದಾರೆ. ಇವುಗಳನ್ನು ಕೌಪಂ ಅಂದರೆ ಬಾವಿಗಳು. ನಾದೇಯಂ ಅಂದರೆ ನದಿಗಳು. ನಿಂತ ನದಿಗಳ ನೀರು ಸಾರಸಂ. ದೊಡ್ಡ ಕೆರೆಗಳು ತಟಾಕ. ಚಿಮ್ಮುವ ಝರಿ ಬುಗ್ಗೆಗಳು ಪ್ರಾಸ್ರಾವಣ. ತಗ್ಗು ನೆಲದಲ್ಲಿ ಜಿನುಗುವ ಔದ್ಧಿತ ಜಲ. ಮಳೆ ನೀರನ್ನು ತಡೆದು ಕಟ್ಟಿಟ್ಟ ಚೌಂಟ್ಯ ಎಂಬ ಏಳು ಪ್ರಕಾರದ ಭೂ ಜಲಗಳ ಪ್ರಕಾರವನ್ನು ಆಯುರ್ವೇದ ಗುರುತಿಸಿದೆ. ಇನ್ನು ಪ್ರದೇಶಗಳಿಗೆ ಅನುಗುಣವಾದ ಮೂರು ಪ್ರಕಾರದ ಬೇರೆ ಬೇರೆ ಗುಣಧರ್ಮದ ನೀರುಗಳಿವೆ. ಕಾರಣ ಶಾಸ್ತ್ರಗಳು ಸೂಚಿತ ಇಂತಹ ನೀರನ್ನು ಮಾತ್ರ ಕುಡಿಯುವಂತಾಗಬೇಕು. ಪ್ರಕೃತಿಯ ಮಧ್ಯ ಶುದ್ಧಗಾಳಿ ಮತ್ತು ನೀರನ್ನು ಮಾತ್ರ ಸೇವಿಸುವ ಯೋಗ ನಿಮ್ಮದಾಗಿಸಿಕೊಳ್ಳಿ ಎಂದು ಶ್ರೀಗಳು ಆಶೀರ್ವಾದವಿತ್ತರು. 
ಚಾತುರ್ಮಾಸ್ಯ ನಿಮಿತ್ತ ಮೂರುದಿನ ಶುಕ್ಲ ಯಜುರ್ವೇದ ಪಾರಾಯಣ ಸಮರ್ಪಿಸಿದ ವೇದ ವಿದ್ವಾಂಸರನ್ನು ಶ್ರೀಗಳು ಆಶೀರ್ವದಿಸಿದರು. ಕರ್ಕಿಯ ಶ್ರೀಜ್ಞಾನೇಶ್ವರಿ ದೈವಜ್ಞ ಮಠದ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಅರುಣಕುಮಾರ ಮತ್ತು ಸದಸ್ಯರು ಸುವಸ್ತುಗಳನ್ನು ಸಮರ್ಪಿಸಿ ಆಶೀರ್ವಾದ ಪಡೆದರು. ಕನ್ನಡ ವೈಶ್ಯವಾಣಿ ಸಮಾಜದವರಿಂದ ಸ್ವರ್ಣಪಾದುಕಾ ಪೂಜೆ ಚಂದ್ರಕಾಂತ ಶೆಟ್ಟಿ ಮುಂತಾದವರಿಂದ ಸಮರ್ಪಿತವಾಯಿತು. ಸುಬ್ರಹ್ಮಣ್ಯ ಹೆಗಡೆ ಕುಟುಂಬದವರು ಶ್ರೀಗುರುಭಿಕ್ಷಾ ಸೇವೆ ಸಲ್ಲಿಸಿದರು. ಡಾ.ಜಿ.ಎಲ್. ಹೆಗಡೆ, ಶ್ರೀಕಾಂತ ಪಂಡಿತ, ಹೇರಂಬ ಶಾಸ್ತ್ರಿ ಮತ್ತು ದಿನಪ್ರಧಾನರಾಗಿ ಸಾದಂಗಾಯ ರಾಮಚಂದ್ರ ಭಟ್ಟ ದಂಪತಿ ಉಪಸ್ಥಿತರಿದ್ದರು.